ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ನಯ್ಯಲಾಲ್ ಹತ್ಯೆ ಘೋರ ಘಟನೆಯಾಗಿದ್ದು, ಇದನ್ನು ನಾಗರಿಕ ಸಮಾಜ ಖಂಡಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಉದಯಪುರ ಹತ್ಯೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಎಲ್ಲ ಧರ್ಮ, ಭಾಷೆಗಳ ಜೊತೆಗೆ ಅನ್ಯೋನ್ಯವಾಗಿರುವ ದೇಶ. ಇಂತಹ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ನಡೆದಾಗ ಇಂತಹ ಸಾವನ್ನು ವೈಭವೀಕರಿಸಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ವ್ಯಕ್ತಿ ಹತ್ಯೆ ಬಗ್ಗೆ ಮಾತನಾಡಲು ಬುದ್ಧಿ ಜೀವಿಗಳ ಬಾಯಿಗೆ ಲಕ್ವಾ ಹೊಡೆದಿದೆಯಾ?: ಆರಗ ಕಿಡಿ
ದೇಶದಲ್ಲಿ ಇದೇ ಮಾದರಿಯಲ್ಲಿ ಹಲವು ಹತ್ಯೆಗಳಾಗಿದೆ. ಹಿಂದೆ ಇದೇ ರಾಜಸ್ಥಾನದಲ್ಲಿ ಶಂಕರಲಾಲ್ ಎನ್ನುವವರು ಓರ್ವ ಯುವಕನ ಹತ್ಯೆ ಮಾಡಿಸಿದ್ದರು. ಫರಿದಾಬಾದ್‍ನಲ್ಲಿ ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ಯುವಕನ ಹತ್ಯೆ ಮಾಡಲಾಗಿತ್ತು. ಕಟುವಾದಲ್ಲಿ ಐದು ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ನಾವು ಖಂಡಿಸಬೇಕು ಎಂದು ವಿವರಿಸಿದರು.
ಅಸಹಿಷ್ಣುತೆ ಎನ್ನುವುದು ಭಾರತದಲ್ಲಿ ಮೊದಲು ಇರಲಿಲ್ಲ. ಎಂಟು ವರ್ಷದ ಹಿಂದೆ ವಿಶ್ವಗುರು ಬಂದ ಬಳಿಕ ಈ ಬೆಳವಣಿಗೆಗಳು ಆರಂಭವಾಗಿವೆ. ಇದನ್ನು ಸಭ್ಯ ನಾಗರಿಕ ಸಮಾಜ ವಿರೋಧಿಸಬೇಕು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದರು. ಇದನ್ನೂ ಓದಿ: ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರು: ಕಟೀಲ್