ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಕೆ.ಜಿ ಹಳ್ಳಿಯಲ್ಲಿ ನಡೆದಿದೆ.
ಕಿರಣ್, ರಂಜಿತಾ ಮತ್ತು ಮಗೇಂದ್ರ ಬಂಧಿತ ಆರೋಪಿಗಳು. ಮೇ ತಿಂಗಳ 29 ರಂದು ಇದಾಯತ್ ನಗರದ ನಿವಾಸಿ ಸ್ಟೀಫನ್ ರಾಜ್(40) ಕೊಲೆಯಾಗಿತ್ತು. ತನ್ನ ಪ್ರಿಯಕರ ಕಿರಣ್ ಹಾಗೂ ಆತನ ಗೆಳೆಯ ಮಗೇಂದ್ರ ಜೊತೆಗೂಡಿ ಪತ್ನಿ ರಂಜಿತಾ ಹತ್ಯೆ ಮಾಡಿದ್ದಳು.
ಏನಿದು ಪ್ರಕರಣ?
ಕೊಲೆಯಾದ ಸ್ಟೀಫನ್ ರಾಜ್ ಕೆ.ಜಿ ಹಳ್ಳಿ ರೌಡಿಶೀಟರ್ ಆಗಿದ್ದು, ವೃತ್ತಿಯಲ್ಲಿ ಮರಗೆಲಸ ಮಾಡುತ್ತಿದ್ದನು. ಕಳೆದ ಕೆಲ ತಿಂಗಳ ಹಿಂದೆ ಪತ್ನಿ ಜೊತೆ ತಮಿಳುನಾಡಿಗೆ ಸ್ಟೀಫನ್ ತೆರಳಿದ್ದನು. ಈ ವೇಳೆ ಸ್ಟೀಫನ್ ರಾಜ್‍ಗೆ ಕಿರಣ್ ಪರಿಚಯವಾಗಿದ್ದನು. ಬಳಿಕ ಸ್ಟೀಫನ್ ಮುಖಾಂತರ ಆತನ ಪತ್ನಿ ರಂಜಿತಾಗೂ ಪರಿಚಯವಾಗಿತ್ತು. ಈ ವೇಳೆ ರಂಜಿತಾ ಹಾಗೂ ಕಿರಣ್ ನಡುವೆ ಪ್ರೀತಿ ಮೂಡಿತ್ತು. ನಂತರ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಶುರುವಾಗಿತ್ತು.
ಇವರಿಬ್ಬರ ಅನೈತಿಕ ಸಂಬಂಧದ ವಿಚಾರ ಮೃತ ಸ್ಟೀಫನ್ ರಾಜ್‍ಗೆ ಗೊತ್ತಾಗಿದೆ. ಪತಿಗೆ ಅನೈತಿಕ ಸಂಬಂಧದ ವಿಚಾರ ಗೊತ್ತಾದ ಹಿನ್ನೆಲೆಯಲ್ಲಿ ಆರೋಪಿ ರಂಜಿತಾ ಪತಿಯ ಕೊಲೆಗೆ ನಿರ್ಧಾರ ಮಾಡಿದ್ದಳು. ಅದರಂತೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದ ಬಳಿಕ ಹತ್ಯೆಗೆ ಸಂಚು ರೂಪಿಸಿದ್ದು, ಕೊಲೆಗೆ ಕಿರಣ್ ಗೆಳೆಯ ಮಗೇಂದ್ರನನ್ನು ಕರೆಸಿಕೊಂಡು ಪತ್ನಿ ರಂಜಿತಾ ಸಂಚು ರೂಪಿಸಿದ್ದಾಳು. ಅದರಂತೆಯೇ ಮೇ29 ರ ಮಧ್ಯರಾತ್ರಿ ಸ್ಟೀಫನ್ ಹತ್ಯೆ ಮಾಡಿದ್ದರು.
ಪತಿಯನ್ನು ಹತ್ಯೆ ಮಾಡಿ ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿ ಕಾಣೆಯಾದ ಬಗ್ಗೆ ದೂರು ನೀಡಿದ್ದಳು. ಅನುಮಾನಗೊಂಡ ಕೆ.ಜಿ ಹಳ್ಳಿ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ಕೃತ್ಯ ಬಹಿರಂಗವಾಗಿದೆ.
ಪ್ರಕರಣ ಸಂಬಂಧ ಕೆ.ಜಿ ಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.