ಕಲಬುರಗಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆ ಎಸಗಿ ಪರಾರಿಯಾಗುತ್ತಿದ್ದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು (Police) ಗುಂಡೇಟು ನೀಡಿದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಿಶ್ವನಾಥ್ ಜಮಾದರ್ ಹತ್ಯೆ ಪ್ರಕರಣದ ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಚಾಕುವಿನಿಂದ ನಿಂಬರ್ಗಾ ಠಾಣೆ ಪಿಎಸ್‍ಐ ಇಂದುಮತಿಯವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಅಫಜಲ್‍ಪುರ ಠಾಣೆ ಪಿಎಸ್‍ಐ ಸೋಮಲಿಂಗ ಒಡೆಯರ್ ಆರೋಪಿಯ ಬಲಗಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ | ಕೊನೆಗೂ ನಾಪತ್ತೆಯಾಗಿದ್ದ ಟ್ರಕ್ ಪತ್ತೆ
ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತ್ತ ಗಾಯಾಳು ಪಿಎಸ್‍ಐ ಇಂದುಮತಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಣಕಾಸು ವಿಚಾರಕ್ಕೆ ಸೆ.13 ರಂದು ಆಳಂದ ತಾಲೂಕಿನ ಖಾನಾಪುರ ಬಳಿ ಆರೋಪಿ, ವಿಶ್ವನಾಥ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಹತ್ಯೆಯಾದ ವಿಶ್ವನಾಥ್ ಜಮಾದರ್ ಮತ್ತು ಆರೋಪಿ ಲಕ್ಷ್ಮಣ್ ಪೂಜಾರಿ ಇಬ್ಬರು ರೌಡಿಶೀಟರ್‌ಗಳು. ಕಳೆದ ಹತ್ತು ವರ್ಷಗಳ ಹಿಂದೆ ತಮ್ಮ ಸಂಬಂಧಿಯನ್ನ ಕೊಲೆ ಮಾಡಬೇಕೆಂದು ವಿಶ್ವನಾಥ್ ಜಮಾದರ್‍ಗೆ, ಲಕ್ಷ್ಮಣ್ ಪೂಜಾರಿ ಐದು ಲಕ್ಷ ರೂ. ಸುಪಾರಿ ನೀಡಿದ್ದ. ಅದರಂತೆ ವಿಶ್ವನಾಥ್ ಜಮಾದರ್, ಲಕ್ಷ್ಮಣ್ ಪೂಜಾರಿ ಸಂಬಂಧಿಯನ್ನು ಮಹಾರಾಷ್ಟ್ರದಲ್ಲಿ ಹತ್ಯೆ ಮಾಡಿದ್ದ. ಬಳಿಕ ಹಣ ಕೊಡುವಂತೆ ಲಕ್ಷ್ಮಣ್‍ಗೆ ಕೇಳಿದ್ರೆ ಹಣ ಕೊಡದೆ ಸತಾಯಿಸುತ್ತಿದ್ದ. ಆಗ ಡಿಲ್‍ನ 5 ಲಕ್ಷ ಹಣಕ್ಕೆ ಬಡ್ಡಿ ಸೇರಿಸಿ 10 ಲಕ್ಷ ರೂ. ಕೊಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಸಾಕಷ್ಟು ಬಾರಿ ಜಗಳ ಕೂಡ ನಡೆದಿತ್ತು. ನಂತರ ಹಣ ಕೊಡದಿದ್ದಾಗ ಲಕ್ಷ್ಮಣ್ ಪೂಜಾರಿ ಮಾವನನ್ನು ಅಪಹರಿಸಿ ತಂದು ಮನೆಯಲ್ಲಿಟ್ಟುಕೊಂಡಿದ್ದ. ಹಣ ಕೊಟ್ಟರೆ ಮಾತ್ರ ನಿಮ್ಮ ಮಾವನನ್ನ ಬಿಡುವುದಾಗಿ ವಿಶ್ವನಾಥ್ ಜಮಾದರ್ ಎಚ್ಚರಿಕೆ ನೀಡಿದ್ದ. ಈ ವೇಳೆ ವಿಶ್ವನಾಥ್‍ನನ್ನ ಮುಗಿಸಿದ್ರೆ ಯಾವ ಹಣನು ಕೊಡುವುದು ಇರುವುದಿಲ್ಲ ಎಂದು ಕೊಲೆಗೈದಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪೇಜರ್ ಬ್ಲಾಸ್ಟ್ ಕೇಸ್‌ನಲ್ಲಿ ಟ್ಟಿಸ್ಟ್ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?