– 400ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ಕೇಸ್
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina), ಬಾಂಗ್ಲಾದೇಶ ಪುರುಷರ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಢಾಕಾದ ಮಾಧ್ಯಮವೊಂದು ವರದಿ ಮಾಡಿದೆ.
ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ (Reservation) ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ ಇದೇ ಆಗಸ್ಟ್ 7ರಂದು ಮುಸ್ಲಿಂ ಮುಖಂಡ (Muslim Leader) ರಫೀಕುಲ್‌ನ ಪುತ್ರ ರುಬೆಲ್ ಎಂಬಾತನ ಹತ್ಯೆಯಾಗಿತ್ತು. ಢಾಕಾದ ಅಡಬೋರ್‌ನ ರಿಂಗ್‌ರಸ್ತೆಯಲ್ಲಿ ನಡೆಯುತ್ತಿದ್ದ ರ‍್ಯಾಲಿ ವೇಳೆ ರುಬೆಲ್‌ನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಘಟನೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಹಾಗೂ ಹಸೀನಾ ಸೇರಿದಂತೆ ನೂರಾರು ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಈ ಕೊಲೆ ಪ್ರಕರಣ ಸಂಬಂಧ ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ (Dhaka Adabor Police) ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶಕೀಬ್ 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫೆರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾನೆ. ಇವರಿಬ್ಬರೂ ಸಂಸತ್ತಿನಲ್ಲಿ ಅವಾಮಿ ಲೀಗ್‌ನ ಮಾಜಿ ಸಂಸದರಾಗಿದ್ದರು. ಪ್ರಕರಣ ದಾಖಲಾಗಿರುವ ಒಟ್ಟು 154 ಪ್ರಮುಖ ವ್ಯಕ್ತಿಗಳ ಪೈಕಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೆಸರೂ ಪ್ರಕರಣದಲ್ಲಿ ದಾಖಲಾಗಿದೆ. ಅಲ್ಲದೇ ಸುಮಾರು 400-500 ಅಪರಿಚಿತ ವ್ಯಕ್ತಿಗಳೂ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಬಿಸಿಸಿಐ ಆತಿಥ್ಯದಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ (Bangladesh) ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ (Shakib Al Hasan) ನೇಮಕಗೊಂಡಿದ್ದರು. ಆದ್ರೆ ಸರಣಿಯುದ್ಧಕ್ಕೂ ಕಳಪೆ ಪ್ರದರ್ಶನದಿಂದಾಗಿ ಲೀಗ್‌ಸುತ್ತಿನಲ್ಲೇ ಹೊರಬಿದ್ದ ಪರಿಣಾಮ ಶಕೀಬ್ ಅವರನ್ನ ನಾಯಕತ್ವದಿಂದ ಕೆಳಗಿಳಿಸಲಾಯಿತು. ಸದ್ಯ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನಜ್ಮುಲ್ ಹೊಸೈನ್ ಶಾಂಟೊ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿದ್ದಾರೆ.