ಕೊಲೆ ಕೇಸಲ್ಲಿ ಬೇಲ್ ಪಡೆದ ರೌಡಿಗಳ ಬಿಲ್ಡಪ್ – ಗನ್‌ಮ್ಯಾನ್, ಎಸ್ಕಾರ್ಟ್ ಭದ್ರತೆಯಲ್ಲಿ ಕೋರ್ಟ್‌ಗೆ ಬಂದ ಗ್ಯಾಂಗ್

Public TV
1 Min Read
hosur rowdy sheeters

– ಬಿಲ್ಡಪ್ ಕೊಡಲು ಹೋಗಿ ಮತ್ತೆ ಜೈಲು ಸೇರಿದ ಗ್ಯಾಂಗ್

ಬೆಂಗಳೂರು ಗ್ರಾಮಾಂತರ: ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಗಳು ಬಿಲ್ಡಪ್ ಕೊಡಲು ಹೋಗಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾರೆ. ಕೊಲೆ ಪ್ರಕರಣದ ಆರೋಪಿಗಳು ಎಸ್ಕಾರ್ಟ್ ಕಾರು, ಗನ್‌ಮ್ಯಾನ್‌ಗಳ ಭದ್ರತೆಯಲ್ಲಿ ಕೋರ್ಟ್ ಬಂದು ಬಿಲ್ಡಪ್ ಕೊಟ್ಟಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರೌಡಿಶೀಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂದೆ ಒಂದು ಎಸ್ಕಾರ್ಟ್ ಕಾರು, ಹಿಂದೆ ಒಂದು ಎಸ್ಕಾರ್ಟ್ ಕಾರು, ಎಸ್ಕಾರ್ಟ್ ಕಾರಿನಲ್ಲಿ ಐದು ಜನ ಗನ್‌ಮ್ಯಾನ್‌ಗಳು, ಹತ್ತಾರು ಪುಡಿ ರೌಡಿಗಳು.. ಹೀಗೆ ಹತ್ಯೆ ಪ್ರಕರಣದ ಆರೋಪಿಗಳ ಬಿಲ್ಡಪ್ ತೆಗೆದುಕೊಂಡು ಸುದ್ದಿಯಾಗಿದ್ದಾರೆ. ಆರೋಪಿಗಳು ನಿನ್ನೆ (ಗುರುವಾರ) ನ್ಯಾಯಾಲಯಕ್ಕೆ ಹಾಜರಾಗಲು ತೆರಳುವಾಗ ಈ ಘಟನೆ ನಡೆದಿದೆ. ಯಾವ ಮಂತ್ರಿಗೂ ಕಮ್ಮಿ ಇಲ್ಲ ಎಂಬಂತೆ ಭದ್ರತೆಯಲ್ಲಿ ರೌಡಿಶೀಟರ್‌ಗಳು ತೆರಳಿ ಅಚ್ಚರಿ ಮೂಡಿಸಿದ್ದರು.

ತಮಿಳುನಾಡಿನ ಹೊಸೂರು ನ್ಯಾಯಾಲಯದ ಬಳಿ ಆತಂಕ ಸೃಷ್ಟಿಸಿದ್ದಾರೆ. ಸರ್ಜಾಪುರ ರಸ್ತೆಯ ಸೂಲಿಕುಂಟೆ ಮೂಲದ ಹತ್ಯೆ ಆರೋಪಿಗಳು ನಿನ್ನೆ ಹೊಸೂರಿನ ನ್ಯಾಯಲಯಕ್ಕೆ ಹಾಜರಾಗಲು ಹೋಗಿದ್ದಾಗ ಘಟನೆ ನಡೆದಿದೆ.

ಸೆ.18 ರಂದು ಸೂಲಿಕುಂಟೆ ಗ್ರಾಮದ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಆರೋಪಿಗಳು ತಮಿಳುನಾಡಿನ ಬಾಗಲೂರು ಬಳಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು. ಆರೋಪಿಗಳಾದ ರೌಡಿಶೀಟರ್ ರೇವಾ, ರೌಡಿಶೀಟರ್ ಸೂಲಿಕುಂಟೆ ಶೀನನ್ನು ಬಾಗಲೂರು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ನ್ಯಾಯಲಯದಲ್ಲಿ ಜಾಮೀನು ಪಡೆದು ಆರೋಪಿಗಳು ಹೊರಬಂದಿದ್ದರು.

ಭದ್ರತೆಯಲ್ಲಿ ಬಂದ ಆರೋಪಿಗಳನ್ನು ಹೊಸೂರಿನ ಟೌನ್ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಹತ್ಯೆ ಆರೋಪಿಗಳು ಸೇರಿದಂತೆ ಗನ್ ಮ್ಯಾನ್‌ಗಳ ಮೇಲೆ ಪ್ರಕರಣ ದಾಖಲಾಗಿದೆ.

Share This Article