ಗದಗ: ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರ ಹಾಗೂ ವ್ಯಾಪಾರಿ ಅಂದಾನಗೌಡ ಪಾಟೀಲ್ ಮೇಲೆ ಮೂರು ಜನ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಮೂರು ಜನ ದುಷ್ಕರ್ಮಿಗಳು ತಡರಾತ್ರಿ ಎಪಿಎಂಸಿ ಆವರಣದ ಮನೆಗೆ ಬಂದಿದ್ದಾರೆ. ಕಳಸಾ ಬಂಡೂರಿ ಹೋರಾಟದ ವೇದಿಕೆಯಲ್ಲಿ ಗಲಾಟೆ ಆಗುತ್ತಿದೆ. ದಯವಿಟ್ಟು ಬಾಗಿಲು ತೆರೆಯಿರಿ ಎಂದು ಕೂಗಿದ್ದಾರೆ. ಅಂದಾನಗೌಡ ಅವರು ಬಾಗಿಲು ತೆರೆಯುತ್ತಿದ್ದಂತೆ ಮುಖಕ್ಕೆ ಖಾರದಪುಡಿ ಎರಚಿ ಹತ್ಯೆಗೆ ಯತ್ನಿಸಿದ್ದು, ಈ ವೇಳೆ ಕೂಗಾಟ, ಚಿರಾಟವಾಗಿದ್ದರಿಂದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾಗಿ ಹಲ್ಲೆಗೊಳಗಾದ ಆನಂದಗೌಡ ಹೇಳಿದ್ದಾರೆ.
ಇವರು ಹೋರಾಟಗಾರರು ಜೊತೆಗೆ ದಲಾಲಿ ಅಂಗಡಿ ವ್ಯಾಪಾರಿಯಾಗಿದ್ದು, ದುಷ್ಕರ್ಮಿಗಳು ಇಂತಹ ಕೃತ್ಯಕ್ಕೆ ಮುಂದಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಷಡ್ಯಂತರದಿಂದ ಹೋರಾಟ ಹತ್ತಿಕ್ಕಲು ಮುಂದಾದ್ರಾ? ಅಥವಾ ದಲಾಲಿ ಅಂಗಡಿ ವ್ಯಾಪಾರಿಯಾದ್ದರಿಂದ ದರೋಡೆಗೆ ಮುಂದಾಗಿದ್ರಾ ಎಂಬ ಅನುಮಾನ ಕಾಡುತ್ತಿದೆ.
ಮನೆಯ ಅಲ್ಲಲ್ಲಿ ಖಾರದ ಪುಡಿಯ ಗುರುತುಗಳಿದ್ದು, ಸ್ಥಳಕ್ಕೆ ನರಗುಂದ ಪೊಲೀಸರು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.