ಪಾಟ್ನಾ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಮತ್ತು ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳಿಗೆ ಪ್ರಾಕ್ಸಿ ಒದಗಿಸುವ ಸಾಲ್ವರ್ ಗ್ಯಾಂಗ್ (Solver Gang) ಮುಖ್ಯಸ್ಥ ರವಿ ಅತ್ರಿ ಎಂಬಾತನನ್ನ ಬಿಹಾರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಸದ್ಯ ಆರೋಪಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು (Bihar Police) ಸ್ಫೋಟಕ ಸಂಗತಿಗಳನ್ನ ಬಯಲಿಗೆಳೆದಿದ್ದಾರೆ. ಅಷ್ಟಕ್ಕೂ ನೀಟ್ ಅಕ್ರಮದಲ್ಲಿ ಸಾಲ್ವರ್ ಗ್ಯಾಂಗ್ ಕೆಲಸ ಏನಾಗಿತ್ತು? ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದದ್ದು ಹೇಗೆ ಅನ್ನೋ ಕುತೂಹಲಕಾರಿ ಸಂಗತಿಗಳನ್ನು ತಿಳಿಯಲು ಮುಂದೆ ಓದಿ.. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ!
ಸಾಲ್ವರ್ ಗ್ಯಾಂಗ್ ಕೆಲಸ ಏನಾಗಿತ್ತು?
ರಾಷ್ಟ್ರವ್ಯಾಪಿಯಾಗಿ ಹುಟ್ಟಿಕೊಂಡಿದ್ದ ಈ ಗ್ಯಾಂಗ್ ಪ್ರಶ್ನೆ ಪತ್ರಿಕೆಯ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡುತ್ತಿತ್ತು. ಟೆಲಿಗ್ರಾಂ, ವಾಟ್ಸಪ್ ಗಳಂತಹ ಮೆಸೆಂಜಿಂಗ್ ಅಪ್ಲಿಕೇಷನ್‌ಗಳ ಮೂಲಕ ಗುಂಪು ರಚಿಸಿ, ಅಗತ್ಯ ಅಭ್ಯರ್ಥಿಗಳಿಗಷ್ಟೇ ಪ್ರಶ್ನೆ ಪತ್ರಿಕೆಗಳನ್ನ ವಿತರಣೆ ಮಾಡುತ್ತಿತ್ತು. ಅದರಲ್ಲೂ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧರಾಗಿರುತ್ತಿದ್ದ ಶ್ರೀಮಂತ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿತ್ತು. ಇದು ಕೇವಲ ಬಿಹಾರಕ್ಕೆ ಮಾತ್ರ ಸೀಮಿತವಾಗಿರದೇ ದೇಶದ ಹಲವು ರಾಜ್ಯಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿತ್ತು. ಪರೀಕ್ಷೆಗೆ ಮುನ್ನಾದಿನ ಹಣ ಪಾವತಿಸಿದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಲಭ್ಯವಾಗುವಂತೆ ನೋಡಿಕೊಳ್ಳುತ್ತಿತ್ತು ಎಂಬ ಸ್ಫೋಟಕ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ʻಪ್ರಾಕ್ಸಿʼ ಪೂರೈಕೆ:
ಇಷ್ಟಕ್ಕೆ ಸುಮ್ಮನಾಗದ ಸಾಲ್ವರ್ ಗ್ಯಾಂಗ್ ಅಗತ್ಯ ಅಭ್ಯರ್ಥಿಗಳ ಬದಲಿಕೆ ಪ್ರಾಕ್ಸಿ ಪೂರೈಸುವ ಕೆಲಸವನ್ನೂ ಮಾಡುತ್ತಿತ್ತು. ಉದಾಹರಣೆಗೆ ಪರೀಕ್ಷಾ ಅಭ್ಯರ್ಥಿಯ ಹೆಸರಿನಲ್ಲಿ ಮತ್ತೊಬ್ಬ ಬುದ್ಧಿವಂತನನ್ನು ಪರೀಕ್ಷೆ ಬರೆಯಲು ಕಳುಹಿಸಿಕೊಡಲಾಗುತ್ತಿತ್ತು. ಬಹುತೇಕ ನೀಟ್ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಭಾನುವಾರ ನಡೆಯಬೇಕಿದ್ದ ನೀಟ್-ಪಿ.ಜಿ ಪರೀಕ್ಷೆ ಮುಂದೂಡಿಕೆ
ಮಾಸ್ಟರ್ ಮೈಂಡ್ ಈ ಮಾಫಿಯಾಗೆ ಸಿಲುಕಿದ್ದು ಹೇಗೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಸ್ಟರ್ ಮೈಂಡ್ ರವಿ ಅತ್ರಿಯನ್ನ 2007 ರಲ್ಲಿ, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ಪೋಷಕರು ರಾಜಸ್ಥಾನದ ಕೋಟಾಗೆ ಕಳುಹಿಸಿದ್ದರು. ಕೆಲ ವರ್ಷಗಳ ಕಾಲ ತಯಾರಿ ನಡೆಸಿದ ಬಳಿಕ ರವಿ 2012ರಲ್ಲಿ ಉತ್ತೀರ್ಣನಾದ. ನಂತರ ಹರಿಯಾಣದ ರೋಹ್ಟಕ್‌ನಲ್ಲಿ PGIಗೆ (ಪಂಡಿತ್ ಭಾಗವತ್ ದಯಾಳ್ ಶರ್ಮಾ ಪಿಜಿ ಸಂಸ್ಥೆ) ಪ್ರವೇಶ ಪಡೆದುಕೊಂಡಿದ್ದ. ಆದ್ರೆ ಪಿಜಿ ಪೂರ್ಣಗೊಳಿಸದೇ 4ನೇ ವರ್ಷದಲ್ಲೇ ವಿದ್ಯಾಭ್ಯಾಸ ತೊರೆದಿದ್ದ. ಆ ಬಳಿಕ ಬೇರೆ ಅಭ್ಯರ್ಥಿಗಳಿಗೆ ಪ್ರಾಕ್ಸಿಯಾಗಿ ಪರೀಕ್ಷೆ ಬರೆಯಲು ಶುರು ಮಾಡಿದ್ದ. ಬಳಿಕ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗೆ ಸಿಲುಕಿದ ಎಂದು ಪೊಲೀಸರು ತನಿಖೆ ನಂತರ ತಿಳಿಸಿದ್ದಾರೆ.
ಎನ್‌ಟಿಎ ಮುಖ್ಯಸ್ಥರ ಬದಲಾವಣೆ
ಈ ನಡುವೆ ನೀಟ್-ಯುಜಿಯಲ್ಲಿನ ಅಕ್ರಮಗಳು ಮತ್ತು ಯುಜಿಸಿ ರದ್ದತಿ ವಿವಾದದ ಮಧ್ಯೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಮುಖ್ಯಸ್ಥರನ್ನು ಸರ್ಕಾರ ಬದಲಾಯಿಸಿದೆ. ಶನಿವಾರ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಸಿಬ್ಬಂದಿ ಸಚಿವಾಲಯವು ಎನ್‌ಟಿಎಯ ಮಹಾನಿರ್ದೇಶಕರಾಗಿದ್ದ ಸುಬೋಧ್ ಕುಮಾರ್ ಸಿಂಗ್ ಅವರ ಜಾಗಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದೆ.