ಕೋಲಾರ: ಸತತ 7 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮೋದಿ ಅಲೆಯಿಂದಾಗಿ ಸೋತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಳೆದ 7 ಬಾರಿ ಗೆಲುವನ್ನು ಸಾಧಿಸಿದಂತೆ ಈ ಬಾರಿ ಕೂಡ ಜಯವನ್ನು ಸಲೀಸಾಗಿ ಪಡೆಯಬಹುದು ಎಂದುಕೊಂಡಿದ್ದ ಮುನಿಯಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ. ಮುನಿಯಪ್ಪ ಅವರ ವಿರೋಧಿ ಅಲೆ ಹಾಗೂ ಮೋದಿ ಅಲೆಯಿಂದ ಎಸ್. ಮುನಿಸ್ವಾಮಿ 2,09,704 ಮತಗಳ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಮುನಿಸ್ವಾಮಿ ಅವರು 7,07,863 ಮತಗಳನ್ನು ಗಳಿಸಿದ್ದರೆ, ಮುನಿಯಪ್ಪ ಅವರು 4,98,159 ಮತಗಳನ್ನು ಪಡೆದು ಸೋಲನ್ನು ಕಂಡಿದ್ದಾರೆ.
ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಬೆಂಬಲಿಗರ ಲೆಕ್ಕಾಚಾರದ ಪ್ರಕಾರ ಎಂದಿನಂತೆ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದರು. ಪ್ರತಿ ಬಾರಿ ಇದೆ ರೀತಿಯ ಪೈಪೋಟಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನಡೆಯುತ್ತಿತ್ತು. ಮೈತ್ರಿ ನಾಯಕರ ಪ್ರಕಾರ ಕೆ.ಎಚ್. ಮುನಿಯಪ್ಪ ಗೆಲುವು ನಿಶ್ಚಯವಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 1 ಲಕ್ಷದವರೆಗೂ ಲೀಡ್ ಬರುವ ಅತಿಯಾದ ಆತ್ಮ ವಿಶ್ವಾಸದಲ್ಲಿದ್ದರು.
ಮುನಿಯಪ್ಪ ಸೋಲು ಕಂಡಿದ್ದು ಯಾಕೆ?
ಕೆಜೆಎಫ್ ಬಿಜಿಎಂಎಲ್ ಸಮಸ್ಯೆಯನ್ನು 18 ವರ್ಷಗಳಿಂದ ಜೀವಂತವಾಗಿಟ್ಟಿರುವುದು, ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ಶುಂಕುಸ್ಥಾಪನೆ ಬಿಟ್ಟರೆ ಉಳಿದಂತೆ ಯಾವುದೇ ಕಾಮಗಾರಿ ನಡೆಯದೆ ಇರುವುದು ಮುನಿಯಪ್ಪ ಸೋಲಿಗೆ ಮುಖ್ಯ ಕಾರಣವಾಗಿದೆ. ಅಲ್ಲದೆ ನೀರಾವರಿ ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡದೇ ಇರುವುದು, ಕ್ಷೇತ್ರದಲ್ಲಿ ಈ ಬಾರಿ ದಲಿತ ಮುಖಂಡರ ಮತ್ತು ಜನಪ್ರತಿನಿಧಿಗಳ ವಿರೋಧವಾಗಿರುವುದರಿಂದ ಈ ಬಾರಿ ಸೋಲನ್ನು ಅನುಭವಿಸುವಂತಾಗಿದೆ.
ಮುನಿಯಪ್ಪ ಅವರ ಇದೇ ಮೈನಸ್ ಪಾಯಿಂಟ್ ಬಿಜೆಪಿ ಅಭ್ಯರ್ಥಿಗೆ ಗೆಲುವಿನತ್ತ ಸಾಗಲು ದಾರಿ ಮಾಡಿಕೊಟ್ಟಿದೆ. ಅಲ್ಲದೆ ಕ್ಷೇತ್ರದಲ್ಲಿ ಬಂಡಾಯ ಕಾಂಗ್ರೆಸ್ ನಾಯಕರು ಮುನಿಯಪ್ಪ ವಿರುದ್ಧ ತಿರುಗಿಬಿದ್ದಿದ್ದು ಹಾಗೂ 7 ಬಾರಿ ಗೆದ್ದವನಿಗೆ 8ನೇ ಗೆಲ್ಲುವುದು ಕಷ್ಟವೇನಲ್ಲ ಎಂಬ ಅತೀಯಾದ ವಿಶ್ವಾಸವೇ ಬಿಜೆಪಿಗೆ ಜಯ ತಂದುಕೊಟ್ಟಿದೆ.