ಬೆಂಗಳೂರು: ಸರ್ಕಾರಕ್ಕೆ ಜನ ಉಪಯೋಗಿ ಶಾಸಕರು, ಜನೋಪಯೋಗಿ ಮಂತ್ರಿಗಳು ಬೇಕು. ಮುನಿರತ್ನ, ಭೈರತಿ, ಗೋಪಾಲಯ್ಯ, ನಾಗೇಶ್ ಜನೋಪಯೋಗಿ ಮಂತ್ರಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರನ್ನು ಹಾಡಿ ಹೊಗಳಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪೀಣ್ಯದಲ್ಲಿ ಹೈಟೆಕ್ ಪದವಿ ಮತ್ತು ಪಿಯುಸಿ ಕಾಲೇಜ್, ಮಾದರಿ ಶಾಲೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸದಾ ಕಾಲ ಕ್ಷೇತ್ರದ ಜನರ ಬಗ್ಗೆ ಯೋಚನೆ ಮಾಡೋರು ಶಾಸಕ ಮುನಿರತ್ನ. ರಾಜರಾಜೇಶ್ವರಿ ಆಶೀರ್ವಾದ ಮುನಿರತ್ನ ಅವ್ರಿಗೆ ಇದೆ. ನಮಗೆ ಜನೋಪಯೋಗಿ ಶಾಸಕರು, ಜನೋಪಯೋಗಿ ಮಂತ್ರಿಗಳು ಬೇಕು. ಮುನಿರತ್ನ, ಭೈರತಿ, ಗೋಪಾಲಯ್ಯ, ನಾಗೇಶ್ ಜನೋಪಯೋಗಿ ಮಂತ್ರಿಗಳು. ದಕ್ಷತೆಯಿಂದ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಬೆಂಗಳೂರನ್ನು ವಿಶ್ವದರ್ಜೆಯ ಸಿಟಿ ಮಾಡಲು ಮುಂದಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗೆ ಮನೆ ಮಗನಂತೆ ಕೆಲಸ ಮಾಡ್ತೀನಿ: ಮುನಿರತ್ನ
ನಾವು ಎರಡು ಪ್ರಮುಖ ಜಂಕ್ಷನ್ ಮಾಡ್ತಿದ್ದೇವೆ. ಗೊರಗುಂಟೆ ಪಾಳ್ಯ ಜಂಕ್ಷನ್ ಮಾಡ್ತಿದ್ದೇವೆ. ಹೆಬ್ಬಾಳ ಜಂಕ್ಷನ್ ಮಾಡಲು ಮಾಸ್ಟರ್ ಪ್ಲ್ಯಾನ್ ನಿರ್ಮಾಣ ಮಾಡಿದ್ದೇವೆ. ಶೀಘ್ರವೇ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕೊಡ್ತೀವಿ. ಮುನಿರತ್ನ ಡಿಗ್ರಿ, ಪಿಯುಸಿ ಕಾಲೇಜ್ ಕಟ್ಟಿ ಪುಣ್ಯದ ಕೆಲಸ ಮಾಡಿದ್ದಾರೆ. ಆಸ್ಪತ್ರೆ, ರಸ್ತೆ ನಿರ್ಮಾಣ ಮಾಡಿದ್ದಾರೆ. ಮುನಿರತ್ನ ದೂರದೃಷ್ಟಿ ಕೆಲಸ ಮಾಡಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಬಳಿಕ ಮಾತನಾಡಿದ ಸಚಿವ ಮುನಿರತ್ನ, 3,500 ವಿದ್ಯಾರ್ಥಿಗಳು ಓದುವ ವ್ಯವಸ್ಥೆ ಮಾಡಲಾಗಿದೆ. ನಾವು ಶಾಶ್ವತವಾಗಿ ಉಳಿಯೋದಿಲ್ಲ. ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕು ಅಂತ ತಿಳಿಸಿದ್ರು. ಕ್ಷೇತ್ರದ ಅಭಿವೃದ್ಧಿಗೆ ಮನೆ ಮಗನಂತೆ ಕೆಲಸ ಮಾಡ್ತೀನಿ ಅಂತ ಭರವಸೆ ನೀಡಿದ್ರು. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ, ಮುನಿರತ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಬಸವರಾಜ್, ಬಿ.ಸಿ ನಾಗೇಶ್, ಗೋಪಾಲಯ್ಯ ಭಾಗವಹಿಸಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಮಾಯಕರಲ್ಲ: ಸಿ.ಟಿ. ರವಿ
ಹೈಟೆಕ್ ಶಾಲಾ-ಕಾಲೇಜ್ ವಿಶೇಷತೆ:
ಪೀಣ್ಯದಲ್ಲಿ ಹೈಟೆಕ್ ಪದವಿ, ಪಿಯುಸಿ ಕಾಲೇಜ್ ಮತ್ತು ಮಾದರಿ ಶಾಲೆ ಕ್ಷೇತ್ರದ ಶಾಸಕರಾದ ಮುನಿರತ್ನ ಅವ್ರ ಆಸಕ್ತಿಯಿಂದ ಈ ಅತ್ಯಾಧುನಿಕ ಸರ್ಕಾರಿ ಶಾಲಾ-ಕಾಲೇಜ್‍ಗಳ ನಿರ್ಮಾಣ ಆಗಿದೆ. ಖಾಸಗಿ ಶಾಲಾ-ಕಾಲೇಜ್‍ಗಳಿಗೆ ಕಡಿಮೆ ಇಲ್ಲದಂತೆ ಈ ನೂತನ ಶಾಲಾ-ಕಾಲೇಜ್‍ಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಲ್ಯಾಬ್ ವ್ಯವಸ್ಥೆ, ಸುಸಜ್ಜಿತವಾದ ಕೊಠಡಿಗಳು, ನುರಿತ ಶಿಕ್ಷಣ, ಉಪನ್ಯಾಸಕರ ವರ್ಗ, ವಿಶಾಲವಾದ ಆಟದ ಮೈದಾನ ಈ ಶಾಲಾ-ಕಾಲೇಜ್‍ಗಳು ಹೊಂದಿವೆ.