ಬೆಂಗಳೂರು: ವರ್ಲ್ಡ್ ಬ್ಯಾಂಕ್ ಲೋನ್‌ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಅಕ್ರಮ ಹಾಗೂ 400 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿ ಡಿಕೆ ಶಿವಕುಮಾರ್ (DK Shivakumar) ಹಾಗೂ ಡಿಕೆ ಸುರೇಶ್ (DK Suresh) ವಿರುದ್ಧ ಶಾಸಕ ಮುನಿರತ್ನ ರಾಜ್ಯಪಾಲರಿಗೆ (Thawar Chand Gehlot) ದೂರು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಜಾಕಾಲುವೆ ಕಾಮಗಾರಿಗಳ ಟೆಂಡರ್‌ಗಳಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ. ವರ್ಲ್ಡ್ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದು, ಸ್ಟಾರ್ ಇನ್ಫ್ರಾಟೆಕ್, ರಾಮಲಿಂಗಂ ಕನ್‌ಸ್ಟ್ರಕ್ಷನ್, ತಿರುಮಲ ಗಿರಿ ಕನ್‌ಸ್ಟ್ರಕ್ಷನ್, ಆರ್‌ಎನ್‌ಎಸ್ ಕನ್‌ಸ್ಟ್ರಕ್ಷನ್ ಹಾಗೂ ಬಿಎಸ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿಗಳಿಂದ ದೊಡ್ಡ ಮೊತ್ತದ ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ ಎಂದು ಆರೋಪಿಸಿದರು.ಇದನ್ನೂ ಓದಿ: ನಡುರಸ್ತೆಯಲ್ಲೇ ಅನ್ಯಧರ್ಮೀಯ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್
ಒಟ್ಟು 16 ವರ್ಕ್ ಆರ್ಡರ್‌ಗಳನ್ನು ಈ ಕಂಪನಿಗಳ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿದ್ದಾರೆ. ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ದೊಡ್ಡ ದೊಡ್ಡ ಕಂಪನಿಗಳಿಂದ 400 ಕೋಟಿ ರೂ. ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ. ಇದರ ಟೆಂಡರ್ ಅನ್ನು ಅನರ್ಹ ಕಂಪನಿಗಳಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಕೈವಾಡ ಇದೆ. ಇನ್ನೂ ಈ ಟೆಂಡರ್ ಅವ್ಯವಹಾರವನ್ನು ಇಡಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ವರ್ಲ್ಡ್ ಬ್ಯಾಂಕ್ ಲೋನ್‌ಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಕಳೆದ ಫೆಬ್ರವರಿಯಲ್ಲಿ ನಾನು ಇಡಿಗೆ ದೂರು ಕೊಟ್ಟಿದ್ದೆ. ಅದಾದ ನಂತರ ಡಿಕೆಶಿ, ಡಿಕೆ ಸುರೇಶ್ ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದಿದ್ದಾರೆ. ಏ.15ಕ್ಕೆ ಟೆಂಡರ್ ಕರೆದಿದ್ದು, ಈ ಗುತ್ತಿಗೆದಾರರ ಕಂಪನಿಗಳಿಗೆ ಅನುಕೂಲ ಆಗುವಂತೆ ಟೆಂಡರ್ ನಿಯಮ ಬದಲಾಯಿಸಲಾಗಿದೆ. ಗುತ್ತಿಗೆದಾರರ ಜೊತೆ ಶಾಮೀಲಾಗಿ 2 ಸಾವಿರ ಕೋಟಿ ರೂ. ಅಕ್ರಮ ಮಾಡುತ್ತಿದ್ದಾರೆ. 400 ಕೋಟಿ ರೂ. ಕಮಿಷನ್ ಪಡೆಯುತ್ತಾರೆ. ಇದನ್ನು ತಡೆಗಟ್ಟಿದರೆ ಸರ್ಕಾರಕ್ಕೆ 400 ಕೋಟಿ ರೂ. ಉಳಿಯಲಿದೆ. ಮಂಗಳವಾರ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ (PIL) ಹಾಕುತ್ತೇವೆ. ಈ ಹಗರಣದ ನೇರ ಹೊಣೆ ಡಿಕೆಶಿ, ಡಿಕೆ ಸುರೇಶ್ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ವಕ್ಫ್ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ