ಸಣ್ಣ ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿರುವುದರಿಂದ ಅವರಿಗೆ ಸೋಂಕುಗಳು ಬಹಳ ಬೇಗನೆ ತಗುಲುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಂಪ್ಸ್ ಕಾಯಿಲೆ (ಮಂಗನ ಬಾವು) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ದೇವರನಾಡು ಕೇರಳದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕೇವಲ 2 ತಿಂಗಳಲ್ಲಿ 15,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎಂದು ಕೇರಳದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅದೇ ರೀತಿ ಈ ಸೋಂಕು ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ. ದಿನೇ ದಿನೇ ಶಾಲಾ ಮಕ್ಕಳಲ್ಲಿ ಈ ಸೋಂಕು ಕಾಣಿಸತೊಡಗಿದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಹಾಗಿದ್ರೆ ಮಂಪ್ಸ್ ಕಾಯಿಲೆಯ ಲಕ್ಷಣಗಳೇನು? ಚಿಕಿತ್ಸೆ ಹೇಗೆ ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿ ವಿವರಿಸಲಾಗಿದೆ.
ಮಂಗನಬಾವು ಎಂದರೇನು?
ಮಂಗನಬಾವು ಅಥವಾ ಮಂಪ್ಸ್ (Mumps Disease) ಎಂದು ಕರೆಯಲ್ಪಡುವ ಕಾಯಿಲೆ ಒಂದು ಸಾಂಕ್ರಮಿಕ ರೋಗವಾಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಬೇಗ ಹರಡುತ್ತದೆ. ಮಂಪ್ಸ್ ಸೋಂಕಿತರು ಸೀನುವುದು ಅಥವಾ ಕೆಮ್ಮಿದಾಗ ಅವರ ಲಾಲಾರಸದಲ್ಲಿರುವ ವೈರಸ್ ಗಾಳಿಯಲ್ಲಿ ಹರಡುವುದರಿಂದ ಮತ್ತೊಬ್ಬರಿಗೆ ಈ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
Advertisement
Advertisement
ಮಂಪ್ಸ್ ಕಾಯಿಲೆ ಲಕ್ಷಣಗಳೇನು?
*ಮಂಪ್ಸ್ ವೈರಸ್ ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ ವಿಪರೀತ ತಲೆನೋವು, ಜ್ವರ ಮತ್ತು ಆಯಾಸದಂತಹ ಲಕ್ಷಣಗಳು ಕಾಣಿಸತೊಡಗುತ್ತದೆ.
*ನಂತರ ಲಾಲಾರಸ ಗ್ರಂಥಿಗಳಲ್ಲಿ ತೀವ್ರವಾದ ಊತ ಕಾಣಿಸುತ್ತದೆ. ಅಲ್ಲದೇ ದವಡೆಗಳು ಮತ್ತು ಕೆನ್ನೆಗಳು ವಿಪರೀತ ಊದಿಕೊಳ್ಳುತ್ತವೆ. ಈ ರೀತಿಯಾದ ಊತದಿಂದ ಆಹಾರ ಸೇವನೆಗೆ ತೊಂದರೆಯುಂಟಾಗುತ್ತದೆ.
*ಕೆಲವೊಮ್ಮೆ ಈ ವೈರಸ್ ಮೆದುಳು, ಮೇದೋಜ್ಜೀರಕ ಗ್ರಂಥಿ, ವೃಷಣಗಳು ಅಥವಾ ಅಂಡಾಂಶಯಗಳು ಸೇರಿದಂತೆ ಇತರೆ ಅಂಗಾಂಗಳ ಮೇಲೆ ಪರಿಣಾಮ ಬೀರಬಹುದು.
*ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಕಾಯಿಲೆಗೆ ತುತ್ತಾಗಬಹುದು.
Advertisement
ಕಾಯಿಲೆಗೆ ಚಿಕಿತ್ಸೆ ಏನು?
ಹಿಂದೆ ಮಂಗನಬಾವು ಮಕ್ಕಳಲ್ಲಿ ಉಂಟಾಗುವ ಬಹಳ ಸಾಮಾನ್ಯ ಕಾಯಿಲೆಯಾಗಿತ್ತು. 1967ರಲ್ಲಿ ಮಂಪ್ಸ್ ಲಸಿಕೆ ಲಭ್ಯವಾದ ನಂತರ ಈ ರೋಗದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ದಡಾರ-ಮಂಪ್ಸ್-ರುಬೆಲ್ಲಾ (ಎಂಎಂಆರ್) ಲಸಿಕೆಯನ್ನು ಕೊಡಿಸುವ ಮೂಲಕ ನಿಮ್ಮ ಮಗುವಿಗೆ ಮಂಗನಬಾವು ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು. ಊದಿಕೊಂಡ ಲಾಲಾರಸ ಗ್ರಂಥಿಗಳ ಮೇಲೆ ತಂಪಾದ ಅಥವಾ ಬೆಚ್ಚಗಿನ ಬಟ್ಟೆಯನ್ನು ಹಾಕಿ.
Advertisement
ಮಂಗನಬಾವು ಲಸಿಕೆ ಸಾಮಾನ್ಯವಾಗಿ ನೀಡಲಾಗುವ ಬಾಲ್ಯದ ವ್ಯಾಕ್ಸಿನೇಷನ್‌ಗಳ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಸಂಯೋಜಿತ ದಡಾರ-ಮಂಪ್ಸ್-ರುಬೆಲ್ಲಾ ಲಸಿಕೆಯಾಗಿ ನೀಡಲಾಗುತ್ತದೆ. 12 ಮತ್ತು 15 ತಿಂಗಳ ವಯಸ್ಸಿನ ನಡುವಿನ ಮೊದಲ ಡೋಸ್ ಹಾಗೂ ಶಾಲೆಗೆ ಪ್ರವೇಶಿಸುವ ಮೊದಲು 4 ಮತ್ತು 6 ವರ್ಷಗಳ ನಡುವಿನ ಎರಡನೇ ಡೋಸ್ ನೀಡಲಾಗುತ್ತದೆ.
ಮಂಗನಬಾವು ಸಾಮಾನ್ಯವಾಗಿ 2-12 ವರ್ಷ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಯಸ್ಕರಿಗೂ ಈ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಅದರೆ ಆರಂಭದಲ್ಲೇ ಇದನ್ನು ಪತ್ತೆ ಹಚ್ಚಿದರೆ ಸಮಸ್ಯೆಯನ್ನು ತಡೆಗಟ್ಟಬಹುದು.
ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಹೆಚ್ಚು ನೀರು ಕುಡಿಯಿರಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
*ಊದಿಕೊಂಡ ಸ್ಥಳಕ್ಕೆ ಬೆಚ್ಚಗಿನ ಅಥವಾ ತಣ್ಣನೆಯ ಶಾಖವನ್ನು ನೀಡುವುದು ಸಹ ಉತ್ತಮ.
*ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ.
*ವೈರಸ್ ಹರಡುವುದನ್ನು ತಡೆಯಲು ಸೋಂಕಿತ ವ್ಯಕ್ತಿಯಿಂದ ದೂರವಿರುವುದು ಉತ್ತಮ.
*ಗಟ್ಟಿ ಪದಾರ್ಥಗಳನ್ನು ಜಗಿಯಲು ಕಷ್ಟವಾಗಿರುವುದರಿಂದ ಮೃದು ಆಹಾರ ಅಥವಾ ದ್ರವ ರೂಪದ ಆಹಾರ ಸೇವನೆ ಉತ್ತಮ.