ಮುಂಬೈ: ರಸ್ತೆಯಲ್ಲಿ ಬಲೂನ್ ಮಾರುತ್ತಿದ್ದ ಮಹಿಳೆ ಮೇಲೆ ಕಾರು ಹರಿದಿದ್ದು, ಆಕೆಯ ಮಗ ಬಚಾವ್ ಆಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಸುಮೇರ್ ನಗರ ಸೇತುವೆ ಕೆಳಗಿರುವ ಸಿಗ್ನಲ್ ಬಳಿ 29 ವರ್ಷದ ಮಹಿಳೆ ತನ್ನ ಮಗುವಿನೊಂದಿಗೆ ಬಲೂನ್ ಮಾರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ತಾಯಿ – ಮಗನ ಮೇಲೆ ಹರಿದಿದೆ. ಈ ವಿಚಾರ ಪಕ್ಕದ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಪತಿಗೆ ತಿಳಿದಿದ್ದು, ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ. ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಬಚಾವ್ ಆಗಿದ್ದಾನೆ. ಇದನ್ನೂ ಓದಿ: ಕಲಬುರಗಿ ನಾಲವಾರ ಜಾತ್ರೆ – ಆಡಳಿತ ಮಂಡಳಿ ಸದಸ್ಯರ ವಿರುದ್ಧ FIR
ಏನಿದು ಘಟನೆ?
ಮೃತ ಲಾಡಬಾಯಿ ಬವಾರಿಯಾ ತನ್ನ ಪತಿ ಧನರಾಜ್(30) ಅವರೊಂದಿಗೆ ಮೀರಾ-ಭಯಂದರ್‍ನಲ್ಲಿ ವಾಸಿಸುತ್ತಿದ್ದಳು. ಪ್ರತಿದಿನ ಬಲೂನ್‍ಗಳು ಮತ್ತು ಬಲ್ಬ್‍ಗಳನ್ನು ಮಾರಾಟ ಮಾಡಲು ಬೋರಿವಲಿಗೆ ಇಬ್ಬರು ತಮ್ಮ 5 ವರ್ಷದ ಮಗ ರಿವಾನ್ಯ್ ಜೊತೆಗೆ ಬರುತ್ತಿದ್ದರು. ಅಂತೆಯೇ ಮಂಗಳವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ದಂಪತಿ ಕೆಲಸ ಮಾಡಲು ಬೊರಿವಲಿಗೆ ಬಂದಿದ್ದಾರೆ. ಲಾಡಬಾಯಿ ತನ್ನ ರಿವಾನ್ಯ್‍ನೊಂದಿಗೆ ಕೋರಾ ಸಿಗ್ನಲ್‍ನಲ್ಲಿ ನಿಂತಿದ್ದಳು. ಧನರಾಜ್ ಭಟ್ಟದ್ ರಸ್ತೆಯಲ್ಲಿ ಬಲೂನ್ ಮಾರಾಟ ಮಾಡಲು ಹೋಗಿದ್ದನು.
ಲಾಡಬಾಯಿ ತನ್ನ ಮಗನೊಂದಿಗೆ ಬಲೂನ್ ಮಾರಾಟ ಮಾಡುತ್ತಿರುವಾಗ ಕಾರೊಂದು ನಿಯಂತ್ರಣ ತಪ್ಪಿ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಬಿದ್ದಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಧನರಾಜ್, ರಸ್ತೆಯಲ್ಲಿ ಬಿದ್ದಿದ್ದ ಪತ್ನಿ ಮತ್ತು ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ. ಚಿಕಿತ್ಸೆ ಸಮಯದಲ್ಲಿ ಲಾಡಬಾಯಿ ಮೃತಪಟ್ಟಿದ್ದಾಳೆ. ಬಾಲಕನ ಕೈ ಮುರಿದಿದ್ದು, ಬದುಕುಳಿದಿದ್ದಾನೆ. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಈ ಹಿನ್ನೆಲೆ ಇತರ ಕ್ಯಾಮೆರಾಗಳನ್ನು ಪರಿಶೀಲಿಸಿ, ತನಿಖೆ ನಡೆಸಲಾಗುತ್ತಿದೆ. ಕಾರನ್ನು ಓಡಿಸುತ್ತಿದ್ದ ವ್ಯಕ್ತಿಯ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಅಪಘಾತ ಮಾಡಿದ ಕಾರು ಎಲೆಕ್ಟ್ರಿಕ್ ಕಾರಿನಂತೆ ಕಾಣುತ್ತಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ.