ಮುಂಬೈ: ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಪತ್ನಿಯ ಮೃತದೇಹವನ್ನು ವ್ಯಕ್ತಿಯೊಬ್ಬ ತನ್ನ ಕಾರಿನಲ್ಲಿ ಇಟ್ಟುಕೊಂಡು ಸುಮಾರು 8 ಗಂಟೆ ಸುತ್ತಾಡಿರುವ ಘಟನೆ ನಗರದಲ್ಲಿ ನಡೆದಿದೆ.
28 ವರ್ಷದ ಸೋಕ್ಲಾರಾಮ್ ಪುರೋಹಿತ್ ಪತ್ನಿ ಮಣಿ ಬೆನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ ಗೃಹಿಣಿ. ಜೂನ್ 7 ರಂದು ಮುಂಬೈನ ಸಕಿ ನಕಾದಲ್ಲಿ ಈ ಘಟನೆ ನಡೆದಿದೆ. ಪುರೋಹಿತ್ ಜೂನ್ 7 ರಂದು ಮಧ್ಯರಾತ್ರಿ ಮನೆಗೆ ಬಂದಾಗ ಪತ್ನಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಆತ ತನ್ನ ಕಾರಿನಲ್ಲಿ ದೇಹವನ್ನು ಇಟ್ಟುಕೊಂಡು ಸಕಿ ನಕಾದಲ್ಲಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿನ ವೈದ್ಯರು ನಿಮ್ಮ ಪತ್ನಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪುರೋಹಿತ್ ಬಳಿಕ ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲೂ ಕೂಡ ವೈದ್ಯರು ಇದನ್ನೇ ಹೇಳಿದ್ದಾರೆ. ಕೊನೆಗೆ ಅವನು ನಗರದೆಲ್ಲೆಡೆ ಸುತ್ತಾಡಿ ಮೃತದೇಹದ ಜೊತೆಗೆ ಮನೆಗೆ ಹಿಂದಿರುಗಿದ್ದಾನೆ. ಬಳಿಕ ಪುರೋಹಿತ್ ಬೆಳಗ್ಗೆ ಸಮುದಾಯ ಆಸ್ಪತ್ರೆಗೆ ಮೃತದೇಹವನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾನೆ. ಆದರೆ ಸ್ನೇಹಿತನ ಸಲಹೆಯ ಮೇರೆಗೆ ಕೊನೆಗೆ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ವೈದ್ಯರು ನಮಗೆ ಮಾಹಿತಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಕಿ ನಕಾ ಪೊಲೀಸರು ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬಳಿಕ ಪತಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಮೃತದೇಹವನ್ನು ರಾಜವಾಡಿ ಆಸ್ಪತೆಗೆ ರವಾನಿಸಲಾಗಿದ್ದು, ಮೃತ ಸಂಬಂಧಿಕರ ಅನುಮಾನದ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದು ಕೊಲೆಯೋ ಅಥವಾ ಆತ್ಮಹತ್ಯೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನವೀನ್ ಸಿ.ರೆಡ್ಡಿ ತಿಳಿಸಿದರು.
ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಈ ದಂಪತಿ ಮದುವೆಯಾಗಿ ಐದು ವರ್ಷಗಳಾಗಿದೆ. ಈ ದಂಪತಿಗೆ ಮಕ್ಕಳಿಲ್ಲ. ಆದ್ದರಿಂದ ಈ ವಿಚಾರದ ಬಗ್ಗೆ ಆಗಾಗ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.