ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ್ದ ರೇಪಿಸ್ಟ್ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಳು!

Public TV
2 Min Read
mumbai mother son murder

ಮುಂಬೈ: ಮಾದಕ ವ್ಯಸನಿಯಾಗಿದ್ದ ಹಾಗೂ ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಗನಿಂದ ಬೇಸತ್ತ ತಾಯಿ ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಾಳೆ.

ಇಲ್ಲಿನ ಪಶ್ಚಿಮ ಭಾಯಂದರ್ ನಿವಾಸಿಯಾದ ಮಹಿಳೆ 50 ಸಾವಿರ ರೂ. ಕೊಟ್ಟು ಆಗಸ್ಟ್ 20ರಂದು ಮಗನನ್ನು ಕೊಲೆ ಮಾಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ವಾಸೈ ಪೊಲೀಸರು ಮಹಿಳೆ ಹಾಗು ಇತರೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ ಕೊಲೆಯಾದ 21 ವರ್ಷದ ರಾಮಚಂದ್ರನ್ ರಾಮದಾಸ್ ದ್ವಿವೇದಿ ಮಾದಕ ದ್ರವ್ಯ ಹಾಗೂ ಸೆಕ್ಸ್ ನ ವ್ಯಸನಿಯಾಗಿದ್ದ. ತನ್ನ ತಾಯಿ, ಮಲತಾಯಿ ಸೇರಿದಂತೆ ಸಾಕಷ್ಟು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ. ಇದರಿಂದ ಬೇಸತ್ತಿದ್ದ ತಾಯಿ ತನ್ನ ಹಿರಿಯ ಮಗ ಸೀತಾರಾಮ್ ಜೊತೆಗೂಡಿ ರಾಮಚಂದ್ರನ್‍ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು.

ನಂತರ ತನ್ನ ಇಬ್ಬರು ಸ್ನೇಹಿತರಾದ ಕೇಶವ್ ಮಿಸ್ತ್ರಿ ಹಾಗೂ ರಾಕೇಶ್ ಯಾದವ್‍ಗೆ ಮಗನನ್ನು ಕೊಲೆ ಮಾಡುವಂತೆ ಹೇಳಿ 50 ಸಾವಿರ ರೂ. ನೀಡಿದ್ದಳು. ಪ್ಲಾನ್‍ನಂತೆ ಆಗಸ್ಟ್ 20ರಂದು ಸೀತಾರಾಮ್, ಕೇಶವ್ ಹಾಗೂ ರಾಕೇಶ್ ಏನೋ ಸುಳ್ಳು ಹೇಳಿ ರಾಮಚಂದ್ರನ್‍ನನ್ನು ಟೆಂಪೋದಲ್ಲಿ ಭಾಯಂದರ್‍ನಿಂದ ಜಾನಕಿಪಾದಾ ಪ್ರದೇಶಕ್ಕೆ ಸುಮಾರು 2 ಗಂಟೆ ರಾತ್ರಿಯಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ರಾಮಚಂದ್ರನ್‍ನನ್ನು ಟೆಂಪೋದಿಂದ ಕೆಳಗಿಳಿಸಿ ಆತನ ಕತ್ತು ಸೀಳಿ, ಗಣಿ ಪ್ರದೇಶದಲ್ಲಿ ಶವವನ್ನ ಎಸೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

mumbai son

ಮರುದಿನ ವಾಲಿವ್ ಪೊಲೀಸರಿಗೆ ರಾಮಚಂದ್ರನ್‍ನ ಶವ ಸಿಕ್ಕಿತ್ತು. ಥಾಣೆ, ಮೀರಾ ಭಾಯಂದರ್, ಪಾಲ್ಘರ್‍ನಲ್ಲಿ ಪೋಸ್ಟರ್‍ಗಳನ್ನು ಹಾಕಿದ್ದರೂ ಸೆಪ್ಟೆಂಬರ್ 14ರವರೆಗೆ ಆತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ರಾಮಚಂದ್ರನ್‍ನ ಶವ ಪತ್ತೆಯಾದ ದಿನದಿಂದಲೇ ಅದೇ ಮುಖ ಚಹರೆಯ ವ್ಯಕ್ತಿ ಕಾಣೆಯಾಗಿರುವುದು ಪೊಲೀಸರಿಗೆ ಗೊತ್ತಾಯಿತು. ನಂತರ ಆತನ ಗುರುತು ಪತ್ತೆ ಮಾಡಿ ಪೊಲೀಸರು ಆರೋಪಿಗಳ ಬೆನ್ನು ಬಿದ್ದರು.

ನಾವು ಭಾನುವಾರದಂದು ಐಪಿಸಿ ಸೆಕ್ಷನ್ 302, 201 ಹಾಗೂ 34ರ ಅಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ವಾಸೈ ವಿಭಾಗದ ಎಸ್‍ಡಿಪಿಓ ಅನಿಲ್ ಅಖ್ಡೆ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *