ಮುಂಬೈ: 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಉಪನ್ಯಾಸದ ವೇಳೆ 2 ಬಾರಿ ಕುಸಿದುಬಿದ್ದು ಮೃತಪಟ್ಟ ಘಟನೆ ಮಂಗಳವಾರದಂದು ಮುಂಬೈನಲ್ಲಿ ನಡೆದಿದೆ.
17 ವರ್ಷದ ಶಶಾಂಕ್ ಅಗರ್‍ವಾಲ್ ಮೃತ ದುರ್ದೈವಿ. ಈತ ಮಿರಾ ರಸ್ತೆಯಲ್ಲಿರೋ ಸಿಂಗಾಪುರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
ಅಧ್ಯಾಪಕರು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಶಶಾಂಕ್‍ಗೆ ಇದ್ದಕ್ಕಿದ್ದಂತೆಯೇ ತಲೆ ಸುತ್ತು ಬಂದಿದೆ. ಪರಿಣಾಮ ಎರಡು ಬಾರಿ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಸಹಪಾಠಿಗಳು ಸ್ಥಳೀಯ ಭಕ್ತಿ ವೇದಾಂತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಶಶಾಂಕ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ಬಗ್ಗೆ ಶಾಲೆಯ ಪ್ರಾಂಶುಪಾಲ ಕೈಸರ್ ಡೊಪೈಶಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಶಶಾಂಕ್ ಆರೋಗ್ಯವಾಗಿಯೇ ಇದ್ದ. ಆತ ಅನಾರೋಗ್ಯಕ್ಕೀಡಾದ ಯಾವುದೇ ವಿಚಾರಗಳು ನಮ್ಮ ಗಮನಕ್ಕೆ ಬಂದಿಲ್ಲ. ಆದ್ರೆ ಬೆಳಗ್ಗೆ 9 ಗಂಟೆಯ ವೇಳೆ ಅಧ್ಯಾಪಕರು ಪಾಠ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಆತನ ಮರಣದ ಸುದ್ದಿ ಕೇಳಿದ ನಮಗೆ ಆಘಾತ ಉಂಟಾಗಿದೆ ಅಂತ ಹೇಳಿದ್ದಾರೆ.
ಶಶಾಂಕ್ ಕಳೆದ ಎರಡು ವರ್ಷದಿಂದ ನಮ್ಮ ಶಾಲೆಯಲ್ಲಿ ಓದುತ್ತಿದ್ದಾನೆ. ಭಾನುವಾರವಷ್ಟೇ ಆತನ ತಂದೆಯನ್ನು ಭೇಟಿಯಾಗಿದ್ದನು. ಬೆಸ್ಟ್ ಸ್ಟೂಡೆಂಟ್ ಎಂದು ಸನ್ಮಾನಿಸಲ್ಪಟ್ಟಿದ್ದ ಅಂತ ಅವರು ಹೇಳಿದ್ರು.
ಶಶಾಂಕ್ ಪೋಷಕರು ದಕ್ಷಿಣ ಮುಂಬೈನ ಪೆಡ್ಡರ್ ರೋಡ್‍ನಲ್ಲಿ ನೆಲೆಸಿದ್ದಾರೆ. ಸದ್ಯ ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಇಂದು ಶಾಲೆಗೆ ರಜೆ ನೀಡಲಾಗಿದೆ. ಅಲ್ಲದೇ ದೀಪಾವಳಿಯ ಎಲ್ಲಾ ಕಾರ್ಯಕ್ರಮಗಳನ್ನು ಈಗಾಗಲೇ ರದ್ದುಮಾಡಲಾಗಿದೆ ಎಂದು ವರದಿಯಾಗಿದೆ.