ಮುಂಬೈ: ಮೊಬೈಲ್ ಕದ್ದಿದ್ದಾನೆಂದು ಆರೋಪಿಸಿ ಯುವಕನೊಬ್ಬನನ್ನು ನಾಲ್ವರು ಥಳಿಸಿ ಕೊಂದಿರುವ ಘಟನೆ ಮುಂಬೈಯ ವಿಕ್ರೋಲಿ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
19 ವರ್ಷದ ರಾಹುಲ್ ಪಂಚಾಲ್ ಮೃತ ದುರ್ದೈವಿ. ಸೋಮವಾರ ಸಂಜೆ ಮೊಬೈಲ್ ಕದ್ದಿದ್ದಾನೆಂದು ಆರೋಪಿಸಿ ನಾಲ್ವರು ವ್ಯಕ್ತಿಗಳು ರಾಹುಲ್‍ನನ್ನು ಮನಬಂದಂತೆ ಥಳಿಸಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ರಾಹುಲ್ ಮೃತಪಟ್ಟಿದ್ದನು.
ಘಟನೆ ಸಂಬಂಧ ಪೊಲೀಸರು ಕೊಲೆ ಆರೋಪಿಗಳಾದ ಸುರೇಶ್ ವರ್ಮ, ಸುರೇಂದ್ರ ವರ್ಮ, ಶಿವಕುಮಾರ್ ವರ್ಮಾ ಹಾಗೂ ಮೋನು ಪಾಂಡೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಮೂವರು ಅಣ್ಣ-ತಮ್ಮಂದಿರಾಗಿದ್ದಾರೆ.
ಈ ಬಗ್ಗೆ ಮೃತ ಯುವಕನ ಪೋಷಕರು ಮಾತನಾಡಿ, ರಾಹುಲ್ ಮೊಬೈಲ್ ಫೋನ್ ಕದ್ದಿರಲಿಲ್ಲ. ಆರೋಪಿಗಳು ಸ್ಥಳೀಯ ಗೂಂಡಾಗಳಾಗಿದ್ದು ಯಾವಾಗಲೂ ರಾಹುಲ್ ಗೆ ತೊಂದರೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ.
ಏನಿದು ಘಟನೆ?
ಕಳೆದ ಎರಡು ವಾರಗಳಿಂದ ಆರೋಪಿ ಸುರೇಶ್ ವರ್ಮಾನ ಫೋನ್ ಮನೆಯಿಂದ ಕಳ್ಳತನವಾಗಿತ್ತು. ಮೊಬೈಲನ್ನು ರಾಹುಲ್ ನೇ ಕಳ್ಳತನ ಮಾಡಿದ್ದನೆಂದು ಸುರೇಶ್ ತಿಳಿದಿದ್ದ. ಹೀಗಾಗಿ ಸೋಮವಾರ ಸಂಜೆ ಮನೆಯಿಂದ ಹೊರ ಬಂದಿದ್ದ ರಾಹುಲ್ ನನ್ನು ಸುರೇಶ್ ಸೇರಿದಂತೆ ನಾಲ್ವರು ಮನಬಂದಂತೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಪರಾರಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv