ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

Public TV
2 Min Read
Mumbai Rain

– ಮುಂಗಾರು ಪ್ರವೇಶದ ಮೊದಲ ದಿನವೇ ಹಲವೆಡೆ ಮಳೆಯ ಆರ್ಭಟ

ಮುಂಬೈ: ಮುಂಗಾರು (Monsoon) ಅಬ್ಬರ ತೀವ್ರಗೊಂಡಿದ್ದು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಭಾರೀ ಮಳೆಯಾಗಿದೆ (Mumbai Rains). ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ 107 ವರ್ಷಗಳಲ್ಲಿಯೇ ದಾಖಲೆಯೇ ದಾಖಲೆಯ ಪ್ರಮಾಣದ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ಸಾಮಾನ್ಯ ಅವಧಿಗಿಂತ 16 ದಿನ ಮುಂಚಿತವಾಗಿಯೇ ನಗರಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಇದು ಕಳೆದ 75 ವರ್ಷಗಳಲ್ಲಿ ಅತ್ಯಂತ ವೇಗವಾಗಿ ನಗರಕ್ಕೆ ಎಂಟ್ರಿಕೊಟ್ಟ ಮುಂಗಾರು ಆಗಿದೆ. ಭಾರೀ ಮಳೆಯಾದ ಹಿನ್ನೆಲೆ ಅವಾಂತರಗಳು ಸೃಷ್ಟಿಯಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಗೆ ನೀರು ನುಗ್ಗಿ, ರಸ್ತೆಗಳೆಲ್ಲಾ ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿದ್ದಾರೆ.

Mumbai Rain 2

107 ವರ್ಷಗಳಲ್ಲೇ ದಾಖಲೆಯ ಮಳೆ
ಮುಂಗಾರು ಪ್ರವೇಶದ ಮೊದಲ ದಿನವೇ ಮುಂಬೈ ನಗರಕ್ಕೆ 107 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಇದಕ್ಕೂ ಮುನ್ನ 1918ರಲ್ಲಿ ಅತಿದೊಡ್ಡ ಮಳೆಯಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ದಾಖಲೆಗಳ ಪ್ರಕಾರ, ದಕ್ಷಿಣ ಮುಂಬೈನ ಹಲವಾರು ಭಾಗಗಳಲ್ಲಿ ಭಾನುವಾರ ತಡರಾತ್ರಿಯಿಂದಲೇ ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ 200 ಮಿಮೀ ಮಳೆಯಾಗಿದೆ. ಕೊಲಾಬಾ ವೀಕ್ಷಣಾಲಯದಲ್ಲಿ, ಮುಂಬೈ ತನ್ನ ಅತಿ ಹೆಚ್ಚು 295 ಮಿಮೀ ಮಳೆ ದಾಖಲಿಸಿದೆ. 1918ರಲ್ಲಿ 279.4 ಮಿಮೀ ಮಳೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರಿಂದು 107 ವರ್ಷಗಳ ದಾಖಲೆಯನ್ನ ಮುರಿದಿದೆ.

ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ?
ಸೋಮವಾರ ಬೆಳಗ್ಗೆ 8:30 ರಿಂದ 11 ಗಂಟೆ ವರೆಗೆ ಕೊಲಾಬಾದಲ್ಲಿ 105.2 ಮಿಲಿಮೀಟರ್ ಮಳೆ, ಸಾಂತಾಕ್ರೂಜ್‌ನಲ್ಲಿ 55 ಮಿಮೀ, ಬಾಂದ್ರಾದಲ್ಲಿ 68.5 ಮಿಮೀ, ಜುಹು ವಿಮಾನ ನಿಲ್ದಾಣದಲ್ಲಿ 63.5 ಮಿಮೀ, ಚೆಂಬೂರ್‌ನಲ್ಲಿ 38.5 ಮಿಮೀ, ವಿಖ್ರೋಲಿನಲ್ಲಿ 37.5 ಮಿಮೀ, ಮಹಾಲಕ್ಷ್ಮಿಯಲ್ಲಿ 33.5 ಮಿಮೀ ಮತ್ತು ಸಿಯಾನ್‌ನಲ್ಲಿ 53.5 ಮಿಮೀ ಮಳೆಯಾಗಿದೆ.

ಇನ್ನೂ ಮುಂಬೈನಲ್ಲಿ ಮುಂಜಾನೆಯಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಬ್ಅರ್ಬನ್ ರೈಲು ಸೇವೆಯಲ್ಲೂ ಕೂಡ ವ್ಯತ್ಯಯವಾಗಿದೆ. ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಮುಂಬೈ ಹಾಗೂ ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ. ಮುಂದಿನ ಮೂರರಿಂದ ನಾಲ್ಕು ಗಂಟೆಗಳಲ್ಲಿ ಮುಂಬೈ ಸೇರಿದಂತೆ ಕೆಲವು ಸ್ಥಳಗಳಲ್ಲಿ ಗಾಳಿಯು ಗಂಟೆಗೆ 50 – 60 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಹೀಗಾಗಿ ಮುಂಬೈ, ಥಾಣೆ, ರಾಯಗಡ್ ಮತ್ತು ರತ್ನಗಿರಿ ಜಿಲ್ಲೆಗಳಿಗೆ ʻರೆಡ್‌ʼ ಅಲರ್ಟ್‌ ಘೋಷಿಸಿದೆ.

75 ವರ್ಷಗಳಲ್ಲೇ ಮೊದಲ ಅವಧಿಪೂರ್ವ ಮುಂಗಾರು
ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್‌ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಮೊದಲ ಅವಧಿಪೂರ್ವ ಮುಂಗಾರು ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ವಿಜ್ಞಾನಿ ಸುಷ್ಮಾ ನಾಯರ್ ತಿಳಿಸಿದ್ದಾರೆ.

Share This Article