ಮುಂಬೈ: ಮಹಿಳೆ ಒಬ್ಬರು ಸರಿಯಾದ ಉಡುಪು ಧರಿಸಿಲ್ಲ ಎಂದು ದೇವಸ್ಥಾನದ ಒಳಗೆ ಹೋಗಲು ತಡೆದಿದ್ದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಬ್ ಇನ್ಸ್ ಪೆಕ್ಟರ್ ಆದ ಪ್ರತೀಕ್ಷಾ ಲಾಕಡೆ ತನ್ನ ತಾಯಿ ಹಾಗೂ ತನ್ನ ಮಗನ ಜೊತೆ ಮುಂಬೈನ ಕಲ್ಯಾಣ್ ನಲ್ಲಿರುವ ಜರಿಮರಿ ದೇವಸ್ಥಾನಕ್ಕೆ ಹೋಗಿದ್ದರು. ಆಗ ದೇವಸ್ಥಾನದ ಸಿಬ್ಬಂದಿ ಒಬ್ಬರು ಪ್ರತೀಕ್ಷಾ ಉಡುಪುನ್ನು ನೋಡಿ ಪ್ರವೇಶ ನಿರಾಕರಿಸಿದ್ದಾರೆ.
Advertisement
ಸಿಐಡಿ ಡಿವಿಷನ್ ನ ಅಧಿಕಾರಿ ಪ್ರತೀಕ್ಷಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ಸಂಜೆ ಸುಮಾರು 7 ಘಂಟೆಗೆ ಪೂಜೆ ನಡೆಯುವ ಸಮಯದಲ್ಲಿ ನನ್ನ ಮಗ ಆಟವಾಡಲು ಹೊರಗೆ ಓಡಿ ಹೋದನು. ನಾನು ಹೊರಗೆ ಹೋಗಿ ಅವನನ್ನು ಕರೆದುಕೊಂಡು ಒಳಗೆ ಬರುವಾಗ ಅಲ್ಲಿದ ಸಿಬ್ಬಂದಿ ಒಬ್ಬರು ನನ್ನನ್ನು ತಡೆದು, ನನ್ನ ಉಡುಪು ಸರಿಯಿಲ್ಲ ಎಂದು ಹೇಳಿ ದೇವಸ್ಥಾನದ ಹೊರಗೆ ಹೋಗಲು ಹೇಳಿದ್ದರು. ಗೌನ್ ಧರಿಸಿ ಬರುವವರಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ ಎಂದು ದೇವಸ್ಥಾನದ ಆವರಣದಲ್ಲಿ ಬೋರ್ಡ್ ಹಾಕಲಾಗಿದೆ ಆದರೂ ಪ್ರವೇಶ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ನಾನು ರಾತ್ರಿ ವೇಳೆ ಧರಿಸುವ ಉಡುಪು ಹಾಕಿದ್ದೇನೆ ಎಂದು ಹೇಳಿ ನಿಂದಿಸಲು ಶುರು ಮಾಡಿದ್ದರು. ದೇವಸ್ಥಾನದ ಒಳಗೆ ಹೋಗಲು ಬಿಡದೆ ನನ್ನನ್ನು ತಡೆದರು ಎಂದು ಹೇಳಿದರು.
Advertisement
ಪ್ರತೀಕ್ಷಾ ಧರಿಸಿದ್ದ ಉಡುಪು ಹೇಗಿತ್ತು?
ನಾನು ಉದ್ದವಾದ ಸ್ಕರ್ಟ್ ಮತ್ತು ಟೀ- ಶರ್ಟ್ ಹಾಕಿದ್ದೇನೆ ಎಂದು ಹೇಳಿದ್ದರೂ ದೇವಸ್ಥಾನದ ಸಿಬ್ಬಂದಿ ಆದ ಆಶಾ ಗಾಯಕ್ ವಾಡ್ ನನ್ನ ಮಾತು ಕೇಳಲಿಲ್ಲ. ನನ್ನ ಮಾತು ಕೇಳದೆ ನನ್ನನ್ನು ನಿಂದಿಸಲು ಶುರು ಮಾಡಿ ನಂತರ ಅಸಭ್ಯವಾಗಿ ಮಾತನಾಡಿದ್ದರು. ನನ್ನ ಮಗನ ಮುಂದೆಯೇ ಆಶಾ ಆ ರೀತಿ ಮಾತನಾಡಲು ಶುರು ಮಾಡಿದ್ದಾಗ ನಾನು ನನ್ನ ತಾಳ್ಮೆಯನ್ನು ಕಳೆದುಕೊಂಡೆ ಎಂದು ಪ್ರತೀಕ್ಷಾ ವಿವರಿಸಿದ್ದಾರೆ.
Advertisement
ಜಗಳ ಶುರುವಾಗಿದ್ದು ಹೇಗೆ?:
ದೇವಾಲಯ ಪ್ರವೇಶಿಸಲು ನಿಗದಿಯಾಗಿದ್ದ ನಿಯಮದ ಪ್ರಕಾರ ಧರಿಸಬೇಕಾದ ಉಡುಪು ಧರಿಸಿಲ್ಲ ಎಂದು ಹೇಳಿ ಪತ್ರೀಕ್ಷಾರ ಉಡುಪನ್ನು ಗಾಯಕ್ ವಾಡ್ ಹಿಡಿದು ಎಳೆದಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಪ್ರತೀಕ್ಷಾ ಗಾಯಕ್ ವಾಡ್ ಗೆ ಹೊಡೆದಿದ್ದಾರೆ. ಜಗಳದ ಬಗ್ಗೆ ಪ್ರತೀಕ್ಷಾ ಪ್ರತಿಕ್ರಿಯಿಸಿ, ನಾನು ನನ್ನ ರಕ್ಷಣೆಗಾಗಿ ಆಕೆಯ ಮೇಲೆ ಕೈ ಮಾಡಿದೆ. ನನ್ನ ಮಗ ನಮ್ಮಿಬ್ಬರ ಜಗಳವನ್ನು ತಡೆಯಲು ಬಂದಿದ್ದನು. ಆದರೆ ಅವನಿಗೆ ಪೆಟ್ಟು ಬೀಳಬಾರದೆಂದು ಆತನನ್ನು ದೂರದಲ್ಲಿ ಕೂರಿಸಿದೆ. ಆದರೆ ಆ ಮಹಿಳೆ ಮತ್ತೆ ಅಸಭ್ಯವಾಗಿ ನಿಂದಿಸಲು ಶುರು ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ಹೊಡೆದಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಪ್ರತೀಕ್ಷಾ ಹಾಗೂ ಗಾಯಕ್ ವಾಡ್ ನಡುವೆ ವಾಗ್ವಾದ ನಡೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಲಾಕಡೆ ಅವರು ಗಾಯ್ಕ್ ವಾಡ್ ಮೇಲೆ ಹಲ್ಲೆ ನಡೆಸಿರೋದು ಕಂಡು ಬಂದಿದೆ.
ಘಟನೆ ನಡೆದ ನಂತರ ಗಾಯಕ್ ವಾಡ್ ಮತ್ತು ಪ್ರತೀಕ್ಷಾ ದೂರು ನೀಡಿದ್ದು ನಾನ್- ಕಾಗ್ನಿಸೆಬಲ್ ಕೇಸ್ ದಾಖಲಾಗಿದೆ. ಈ ಬಗ್ಗೆ ಕೋಶಲೆವಾಡಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿ, ಈ ಜಗಳ ಮೊದಲು ಯಾರೂ ಶುರು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.