ಮುಂಬೈ: 2008ರ ನವೆಂಬರ್ 26ರಂದು ನಡೆದಿರುವ ಭಯೋತ್ಪಾದನಾ ದಾಳಿಯಂತೆ ಮತ್ತೊಂದು ಅಟ್ಯಾಕ್ ಮಾಡುವ ಬೆದರಿಕೆ ಕರೆಯೊಂದು (Threat Call) ಮುಂಬೈ ಪೊಲೀಸರಿಗೆ ಬಂದಿದೆ.
ತನ್ನ ಗೆಳಯನಿಗೋಸ್ಕರ ಸೀಮಾ ಹೈದರ್ (Seema Haider) ಎಂಬ ಮಹಿಳೆ ಪಾಕಿಸ್ತಾನದಿಂದ (Pakisthan) ಭಾರತಕ್ಕೆ ಬಂದು ನೆಲೆಸಿದ್ದಾರೆ. ಇದೀಗ ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದಿದ್ದರೆ 26/11 ರಲ್ಲಿ ಮುಂಬೈ ಮೇಲೆ ನಡೆದ ಉಗ್ರ ದಾಳಿಯಂತೆ ಮತ್ತೆ ಅಟ್ಯಾಕ್ ಮಾಡಲಾಗುವುದು ಎಂಬ ಎಚ್ಚರಿಕೆಯ ಕರೆ ಇದಾಗಿದೆ.
ಈ ಸಂಬಂಧ ಮುಂಬೈ ಪೊಲೀಸರು (Mumbai Police) ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಬುಧವಾರ ಕಂಟ್ರೋಲ್ ರೂಮ್ ಗೆ ಕರೆ ಬಂದಿತ್ತು. ಈ ಕಾಲ್ ರಿಸೀವ್ ಮಾಡಿದಾಗ ಆ ಕಡೆಯಿಂದ, ಸೀಮಾ ಹೈದರ್ ನನ್ನು ಪಾಕಿಸ್ತಾನಕ್ಕೆ ಆದಷ್ಟು ಬೇಗ ಕಳುಹಿಸಿಕೊಡಿ. ಒಂದು ವೇಳೆ ನೀವು ಕಳುಹಿಸಿಕೊಡದಿದ್ದರೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ (Mumbai Attack) ದಾಳಿಯಂತೆ ಮತ್ತೊಂದು ದಾಳಿಯನ್ನು ಎದುರಿಸಲು ಸಿದ್ಧರಾಗಿ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಸದ್ಯ ಮುಂಬೈ ಪೊಲೀಸ್ ಹಾಗೂ ಕ್ರೈಂ ಬ್ರ್ಯಾಂಚ್ ತಂಡ ತನಿಖೆಗಿಳಿದಿದೆ. ಕರೆ ಮಾಡಿದ ವ್ಯಕ್ತಿ ಯಾರು ಎಂಬುದು ಪತ್ತೆಯಾಗಿಲ್ಲ.
ಜುಲೈ ಮೊದಲ ವಾರದಲ್ಲಿ ಆನ್‍ಲೈನ್ ಗೇಮ್ ಆ್ಯಪ್ ಮೂಲಕ ಪರಿಚಯವಾದ ತನ್ನ ಗೆಳೆಯನನ್ನು ಭೇಟಿ ಮಾಡಲೆಂದು 4 ಮಕ್ಕಳ ಜೊತೆ ಸೀಮಾ ಭಾರತವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದರು. ನಂತರ ಹಿಂದೂಗೆ ಮತಾಂತರವಾಗುತ್ತೇನೆ ಅಲ್ಲದೆ ಹೆಸರು ಕೂಡ ಬದಲಾಯಿಸಿಕೊಳ್ಳುವುದಾಗಿ ಹೇಳಿದ ಬಳಿಕ ಆಕೆಗೆ ಕೋರ್ಟ್ ಜಾಮೀನು ನೀಡಿದೆ. ಸದ್ಯ ಸೀಮಾ ಗ್ರೇಟರ್ ನೊಯ್ಡಾದಲ್ಲಿ ತನ್ನ ಗೆಳೆಯನ ಜೊತೆ ವಾಸವಾಗಿದ್ದಾಳೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತೆರಳಲ್ಲ ಎಂದು ಹೇಳಿದ್ದಾಳೆ.
Web Stories