ಎನ್‍ಸಿಪಿ ಸಚಿನ್ ಅಹಿರ್ ಶಿವಸೇನೆಗೆ ಜಂಪ್

Public TV
1 Min Read
shiv sena

ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ನಾಯಕರ ಪಕ್ಷಾಂತರ ನಡೆಯುತ್ತಿದ್ದು, ಮುಂಬೈ ವಿಭಾಗದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ) ಮುಖ್ಯಸ್ಥ ಹಾಗೂ ಮಾಜಿ ಸಚಿವ ಸಚಿನ್ ಅಹಿರ್ ಅವರು ಗುರುವಾರ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.

ಶಿವ ಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಹಾಗೂ ಮುಖಂಡ ಆದಿತ್ಯ ಠಾಕ್ರೆ ಅವರ ನೇತೃತ್ವದಲ್ಲಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಸಚಿನ್ ಅಜಿರ್ ಅವರು ಕಳೆದ ಬಾರಿಯ ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಎನ್‍ಸಿಪಿಯನ್ನು 1999ರಲ್ಲಿ ಶರದ್ ಪವಾರ್ ಸ್ಥಾಪಿಸಿದ್ದಾರೆ.

ಸಚಿನ್ ಅಹಿರ್ ಅವರು 1999ರಿಂದ 2009ರ ವರೆಗೆ ಎನ್‍ಸಿಪಿಯಿಂದ ಮುಂಬೈನ ಶಿವದಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಕ್ಷೇತ್ರ ಮರು ವಿಂಗಡನೆ ನಂತರ ವೋರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2014ರ ವಿಧಾನಸಭೆ ಚುನಾವಣೆಯಲ್ಲಿ ಶಿವ ಸೇನಾ ಅಭ್ಯರ್ಥಿ ಸುನಿಲ್ ಶಿಂಧೆ ಅವರ ವಿರುದ್ಧ ಸೋಲನುಭವಿಸಿದ್ದರು.

ಶಿವಸೇನೆ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಅಹಿರ್, ಎನ್‍ಸಿಪಿಯೊಂದಿಗೆ ಯಾವುದೇ ರೀತಿಯ ದ್ವೇಷವಿಲ್ಲ. ಆದರೆ, ಈಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಕೆಲ ಅನಿವಾರ್ಯ ನಿರ್ಧಾರಗಳನ್ನು ಕೈಗೊಳ್ಳಬೇಕಾಯಿತು. ಇದಕ್ಕೂ ಮೊದಲು ಸಾಮಾಜಿಕ ಕಾರ್ಯಕ್ರಮದಲ್ಲಿ ಆದಿತ್ಯ ಠಾಕ್ರೆಯವರನ್ನು ಭೇಟಿಯಾಗಿದ್ದ ಸಚಿನ್ ಅಹಿರ್, ಶಿವಸೇನೆಗೆ ಆದಿತ್ಯ ಅವರಂಥ ನಾಯಕರ ಅವಶ್ಯಕತೆ ಇದೆ. ನಗರದ ರಾಜಕೀಯದಲ್ಲಿ ಅವರು ಪರಿಣಿತರಾಗಿದ್ದಾರೆ ಎಂದು ಹೊಗಳಿದ್ದರು.

shivsena

ಶಿವ ಸೇನೆ ಪಕ್ಷವು ಮಹಾರಾಷ್ಟ್ರದ ಬಹುತೇಕ ನಗರ ಸಭೆಗಳಲ್ಲಿ ಅಧಿಕಾರದಲ್ಲಿದ್ದು, ಸಚಿವನಾಗಿ ಕೆಲಸ ಮಾಡಿದ ನನ್ನ ಅನುಭವವನ್ನು ನಗರಗಳ ಅಭಿವೃದ್ಧಿಗೆ ಬಳಸಬಹುದಾಗಿದೆ. ಅಧಿಕಾರ ವಹಿಸಿಕೊಂಡು ನಗರಗಳ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್-ಅಕ್ಟೋಬರ್‍ನಲ್ಲಿ ನಡೆಯುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ವೋರ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸಚಿನ್ ಅಹಿರ್ ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *