ಮುಂಬೈ: ಮನೆಯ ಮುಂದೆ ಹಸಿವಿನಿಂದ ಮೂರ್ಛೆ ಬಿದ್ದ ಬಿಹಾರದ ಕೂಲಿ ಕಾರ್ಮಿಕನಿಗೆ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಸಹಾಯ ಮಾಡಿದ್ದಾರೆ.
ಕೊರೊನಾ ಭಯದಿಂದ ದೇಶ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ದಿನಗೂಲಿ ಕಾರ್ಮಿಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಡಲು ಕೆಲಸವಿಲ್ಲದೇ, ಹೊಟ್ಟೆಗೆ ಊಟವಿಲ್ಲದೇ, ಊರಿಗೆ ವಾಪಸ್ ಹೋಗಲು ಪರಾದಡುತ್ತಿದ್ದಾರೆ. ಇನ್ನೂ ಕೆಲವರು ಹಸಿವಿನ ನಡುವೆಯೂ ತಮ್ಮ ಗ್ರಾಮಗಳಿಗೆ ನಡೆದುಕೊಂಡು ಹೋಗುವ ಸಾಹಸ ಮಾಡುತ್ತಿದ್ದಾರೆ.
https://www.instagram.com/p/B-7vtuXJlDR/
ಲಾಕ್‍ಡೌನ್ ಸಮಯದಲ್ಲಿ ಎಲ್ಲ ಸೆಲೆಬ್ರಿಟಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಹಾಗೆಯೇ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಮೊಹಮ್ಮದ್ ಶಮಿ ಇನ್‍ಸ್ಟಾ ಲೈವ್ ಬಂದಿದ್ದು, ಈ ವೇಳೆ ಶಮಿ ಅವರು ಈ ಕೂಲಿ ಕಾರ್ಮಿಕನ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಹಸಿವಿನಿಂದ ಕುಸಿದು ಬಿದ್ದ ಆತನಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಆ ಕೂಲಿ ಕಾರ್ಮಿಕ ರಾಜಸ್ಥಾನದಿಂದ ಬಿಹಾರಕ್ಕೆ ನಡೆದುಕೊಂಡು ಹೋಗುತ್ತಿದ್ದ. ಆತನಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಅವನು ನಡೆದುಕೊಂಡು ಹೋಗುತ್ತಾನೆ ಎಂದರೆ ನನಗೆ ಊಹಿಸಲು ಆಗುತ್ತಿಲ್ಲ. ಆದರೆ ಅವನು ನನ್ನ ಮನೆಯ ಬಾಗಿಲ ಬಳಿ ಊಟವಿಲ್ಲದೇ ಮೂರ್ಛೆ ತಪ್ಪಿಬಿದ್ದಿರುವುದನ್ನು ನಾನು ನನ್ನ ಮನೆಯ ಸಿಸಿಟಿವಿಯಲ್ಲಿ ನೋಡಿದೆ. ತಕ್ಷಣ ಹೋಗಿ ಅವನಿಗೆ ಊಟ ನೀಡಿ ಸಹಾಯ ಮಾಡಿದೆ ಎಂದು ಶಮಿ ಲೈವ್‍ನಲ್ಲಿ ಹೇಳಿದ್ದಾರೆ.
ನಾನು ನನ್ನ ಕೈಯಲ್ಲಿ ಆದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೂಲಿ ಕಾರ್ಮಿಕರು ಅವರ ಗ್ರಾಮಗಳಿಗೆ ಹೋಗಲು ತುಂಬ ಕಷ್ಟಪಡುತ್ತಿದ್ದಾರೆ. ನನ್ನ ಮನೆ ಹೆದ್ದಾರಿಗೆ ಸಮೀಪವೇ ಇದೆ ಹಾಗಾಗಿ ನಾನು ಜನರು ಬಹಳ ಕಷ್ಟ ಪಡುತ್ತಿರುವುದನ್ನು ತೀರ ಹತ್ತಿರದಿಂದ ನೋಡುತ್ತಿದ್ದೇನೆ. ನನಗೆ ಅವರನ್ನು ನೋಡಿದರೆ ಸಹಾಯ ಮಾಡಬೇಕು ಎನಿಸುತ್ತದೆ. ಹಾಗಾಗಿ ನನಗೆ ಆದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.
ಈ ನಡುವೆ ಶಮಿ ಮತ್ತು ಚಹಲ್ ನಡುವೆ ಕೆಲ ಫನ್ನಿ ಮಾತಕತೆಗಳು ನಡೆದಿದ್ದು, ಈ ಲಾಕ್‍ಡೌನ್ ಸಮಯ ಕ್ರಿಕೆಟಿಗರಿಗೆ ಅಡುಗೆ ಮಾಡುವುದನ್ನು ಕಲಿಯಲು ಸಹಾಯವಾಗಲಿದೆ. ನಾನು ಕೂಡ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ. ಅಡುಗೆ ಕೋಣೆಗೆ ಹೋಗಿ ಅಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.
https://www.instagram.com/p/B9Duh2fpS2T/
ಲೈವ್‍ನಲ್ಲಿ ಚಹಲ್ ಶಮಿ ಅವನ್ನು ನಿಮ್ಮ ಕ್ರಿಕೆಟ್ ವೃತ್ತಿಜೀವನದ ಮರೆಯಲಾಗದ ಕ್ಷಣವನ್ನು ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಶಮಿ 2013 ರಲ್ಲಿ ಈಡನ್ ಗಾರ್ಡನ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಶಮಿ ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್‍ಗಳನ್ನು ಪಡೆದಿದ್ದರು.