ಮುಂಬೈ: ಮಹಾರಾಷ್ಟ್ರದ ಅಚ್ಚರಿ ಸರ್ಕಾರಕ್ಕೆ ಇಂದು ನಿರ್ಣಾಯಕ ದಿನ. ಶಿವಸೇನೆಯ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಅಲ್ಲದೆ ಸರ್ಕಾರ ರಚನೆ ಬಗ್ಗೆ ಇದ್ದ ಗೊಂದಲಗಳು ಕೂಡ ಬಗೆಹರಿಯಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಮುಂದುವರಿಸಲಿದೆ. ನ್ಯಾ. ಎನ್.ವಿ ರಮಣ ನೇತೃತ್ವದ ವಿಚಾರಣೆ ನಡೆಯಲಿದ್ದು ಇಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಸರ್ಕಾರದ ಪರ ವಕೀಲರು ಸರ್ಕಾರ ರಚನೆಗೆ ಸಂಬಂಧಿಸಿದ ಎರಡು ಪ್ರಮುಖ ಪತ್ರಗಳನ್ನು ಸುಪ್ರೀಂಕೋರ್ಟಿಗೆ ನೀಡಲಿದ್ದಾರೆ.
ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಪತ್ರ ಸಲ್ಲಿಸಲು ಸುಪ್ರೀಂಕೋರ್ಟ್ ಕೇಳಿದ್ದು ಬಿಜೆಪಿ ಮತ್ತು ಮಹಾರಾಷ್ಟ್ರ ರಾಜ್ಯಪಾಲರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಬಿಜೆಪಿ ಮತ್ತು ಎನ್‍ಸಿಪಿ ಶಾಸಕರ ಬೆಂಬಲ ಪತ್ರದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು ಯಾವಾಗ ಅನ್ನೋದರ ಬಗ್ಗೆ ಫಡ್ನವಿಸ್ ಸುಪ್ರೀಂಕೋರ್ಟ್ ಅಫಿಡವಿಟ್ ಸಲ್ಲಿಸಬೇಕಿದೆ. ಇತ್ತ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದ್ದು ಹಾಗೂ ರಾಷ್ಟ್ರಪತಿ ಆಳ್ವಿಕೆ ಹಿಂದೆ ಪಡೆದ ಪ್ರಕ್ರಿಯೆ ಏನು ಅನ್ನೋದರ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಮಾಹಿತಿ ನೀಡಬೇಕಿದೆ. ಈ ಎರಡು ಪತ್ರಗಳಿಂದ ರಾತ್ರೋರಾತ್ರಿ ಸರ್ಕಾರ ರಚನೆ ಆಗಿದ್ದು ಹೇಗೆ ಅನ್ನೋ ಮಹಾ ಸೀಕ್ರೆಟ್ ಅಧಿಕೃತವಾಗಿ ಬಯಲಾಗುವ ಸಂಭವ ಇದೆ.
ಸುಪ್ರೀಂಕೋರ್ಟ್, ಬಹುಮತ ಸಾಬೀತಿಗೆ ಸೂಚಿಸುವ ಸಾಧ್ಯತೆಗಳಿದ್ದು ಬಿಜೆಪಿ ಈಗಾಗಲೇ ಕಾರ್ಯಪವೃತ್ತವಾಗಿದೆ. ಕಾಂಗ್ರೆಸ್, ಶಿವಸೇನೆ ಸೇರಿ ಅಜಿತ್ ಪವಾರ್ ಮೂಲಕ ಎನ್‍ಸಿಪಿ ಶಾಸಕರಿಗೆ ಕಲಮಪಡೆ ನಾಯಕರು ಗಾಳ ಹಾಕುತ್ತಿದ್ದಾರೆ. ಹೇಗಾದರೂ ಮಾಡಿ ಬಹುಮತ ತೋರಿಸಬೇಕು ಎಂದು ಬಿಜೆಪಿ ಹೆಣಗಾಡುತ್ತಿದೆ. ಈ ನಡುವೆ ಸೋಮವಾರ ತಡರಾತ್ರಿ ಫಡ್ನವಿಸ್-ಅಜಿತ್ ಪವಾರ್ ಮಹತ್ವದ ಸಭೆ ನಡೆಸಿದರು.
ಬಿಜೆಪಿಯ ರಣತಂತ್ರಗಳಿಗೆ ಚೆಕ್‍ಮೆಟ್ ಇಡಲು ಕರ್ನಾಟಕದ ಟ್ರಬಲ್ ಶೂಟರ್ ಡಿಕೆಶಿಯನ್ನು ಎಐಸಿಸಿ ರಂಗಕ್ಕೆ ಇಳಿಸಿದೆ. ನಿನ್ನೆ ತಡರಾತ್ರಿ ಡಿಕೆಶಿ ಮುಂಬೈಗೆ ಬಂದಿಳಿದಿದ್ದು, ಇಡೀ ರಾತ್ರಿ ಶಾಸಕರನ್ನು ರಕ್ಷಿಸುವ ಬಗ್ಗೆ ಮಹಾ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದನ್ನೂ ಓದಿ; ಭಾನುವಾರ ನಮಗೂ ರಜೆ ಆದರೂ ವಿಚಾರಣೆ ಮಾಡುತ್ತಿದ್ದೇವೆ – ಸುಪ್ರೀಂ ಕೋರ್ಟ್
ಮತ್ತೊಂದೆಡೆ ರೆಸಾರ್ಟಿಗೆ ತೆರಳಿರುವ ಮುಖಂಡರು ಶಾಸಕರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಮತ್ತು ಶಾಸಕರನ್ನು ಒಟ್ಟಾಗಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ, ಅಜಿತ್ ಪವಾರ್ ಬಿಜೆಪಿ ಜೊತೆ ಗುರುತಿಸಿಕೊಂಡಿಯೂ ತಾನಿನ್ನೂ ಎನ್‍ಸಿಪಿಯಲ್ಲೇ ಇದ್ದೇನೆ. ತಮ್ಮ ನಾಯಕ ಶರದ್ ಪವಾರ್, ನಾವು ಬಿಜೆಪಿ ಜೊತೆಗೂಡಿ ಸ್ಥಿರ ಸರ್ಕಾರ ನೀಡುತ್ತೇವೆ ಎಂದು ಟ್ವೀಟ್ ಮಾಡಿ ಗೊಂದಲ ಬೇರೆ ಸೃಷ್ಟಿಸಿದ್ದಾರೆ. ಆದರೆ ಶರದ್ ಪವಾರ್ ಇದನ್ನು ತಳ್ಳಿಹಾಕಿದ್ದು, ಬಿಜೆಪಿ ಜೊತೆ ಸೇರೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಬಹುಮತ ಸಾಬೀತಿಗೆ ಸುಪ್ರೀಂಕೋರ್ಟ್ ಯಾವಾಗ ಸೂಚಿಸುತ್ತೋ ಅನ್ನೋ ಆತಂಕದಲ್ಲಿ ಬಿಜೆಪಿ ಇದ್ದರೆ ಮತ್ತೊಂದು ಕಡೆ ಶಾಸಕರನ್ನು ಉಳಿಸಿಕೊಂಡರೆ ಎಂದು ಶಿವಸೇನೆ ಕಾಂಗ್ರೆಸ್ ಎನ್ ಸಿಪಿ ತಂತ್ರಗಳನ್ನು ಮಾಡುತ್ತಿದೆ. ಇದೆಲ್ಲದರ ನಡುವೆ ಇಂದು ಸುಪ್ರೀಂಕೋರ್ಟ್ ನೀಡುವ ತೀರ್ಪು ಮಹತ್ವದಾಗಿದ್ದು ಏನು ಹೇಳುತ್ತೆ ಎಂದು ಕಾದು ನೋಡಬೇಕು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ