ಮುಂಬೈ; ಕೊರೊನಾ ಲಾಕ್‍ಡೌನ್ ನಡುವೆಯೂ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ತಂದೆ ಪ್ರತಿದಿನವೂ ಹೊರಗೆ ಬರುತ್ತಿದ್ದಾರೆ.
ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಿರುವಾಗ ಸಲ್ಲು ತಂದೆ ಸಲೀಂ ಖಾನ್ ಹೊರಗೆ ಬಂದು ಲಾಕ್‍ಡೌನ್ ಉಲ್ಲಂಘನೆ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಅವರು ಹೊರೆಗೆ ಬರುತ್ತಿರುವುದಕ್ಕೆ ಕಾರಣ ಸಲೀಂ ಅವರಿಗೆ ಬೆನ್ನಿನ ನೋವಿನ ಸಮಸ್ಯೆಯಿದ್ದು, ವೈದ್ಯರ ಸಲಹೆಯೆಂತೆ ಪ್ರತಿ ದಿನ ಹೊರಗೆ ಬಂದು ವಾಕಿಂಗ್ ಮಾಡುತ್ತಿದ್ದಾರೆ.
ಈ ವಿಚಾರವಾಗಿ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ 84 ವರ್ಷದ ಸಲೀಂ ಖಾನ್, ನನಗೆ ಬೆನ್ನು ನೋವಿನ ಸಮಸ್ಯೆಯಿದೆ. ಹೀಗಾಗಿ ವೈದ್ಯರ ಸಲಹೆಯಂತೆ ಲಾಕ್‍ಡೌನ್ ಇದ್ದರೂ ಹೊರಗೆ ಹೋಗಿ ವಾಕಿಂಗ್ ಮಾಡುತ್ತೇನೆ. ನಾನು ಕಳೆದ 40 ವರ್ಷದಿಂದ ಈ ರೀತಿ ವಾಕಿಂಗ್ ಮಾಡುತ್ತಿದ್ದೇನೆ. ಈಗ ತಕ್ಷಣ ಆ ಅಭ್ಯಾಸವನ್ನು ನಿಲ್ಲಿಸಿದರೆ ನನ್ನ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಲು ನಾನು ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದೇನೆ. ಆರೋಗ್ಯದ ದೃಷ್ಟಿಯಿಂದ ನನಗೆ ಈ ಪಾಸ್ ಸಿಕ್ಕಿದೆ. ನನ್ನ ಬಳಿ ಏಪ್ರಿಲ್ 30ರ ವರೆಗೆ ಮನೆಯಿಂದ ಹೊರಗೆ ಹೋಗಲು ಪಾಸ್ ಇದೆ. ಇದರ ಜೊತೆಗೆ ಮನೆಯಿಂದ ಹೊರಗೆ ಹೋಗುವಾಗ ನಾನು ಕೊರೊನಾ ಸುರಕ್ಷತಾ ಕ್ರಮವನ್ನು ತಗೆದುಕೊಳ್ಳುತ್ತಿದ್ದೇನೆ ಎಂದು ಸಲೀಂ ಖಾನ್ ಅವರು ಹೇಳಿದ್ದಾರೆ.
ನಾನು ಕಾನೂನುಗಳನ್ನು ಹೆಚ್ಚು ಪಾಲಿಸುವ ವ್ಯಕ್ತಿ. ಹೀಗಾಗಿ ಆರೋಗ್ಯದ ಸಮಸ್ಯೆಯಿಂದ ಮಾತ್ರ ಮನೆಯಿಂದ ಹೊರಗೆ ಹೋಗುತ್ತೇನೆ. ಆದರೆ ನಮ್ಮ ಏರಿಯಾದಲ್ಲೇ ಕೆಲವರು ಯಾವುದೇ ಅನುಮತಿ ಪಡೆಯದೆ ಮನೆಯಿಂದ ಹೊರ ಬರುತ್ತಾರೆ. ನಾಯಿಯನ್ನು ಕರೆದುಕೊಂಡು ಏರಿಯಾದ ಎಲ್ಲಾ ಕಡೆ ಸುತ್ತುತ್ತಾರೆ. ನಾವು ಸೆಲೆಬ್ರಿಟಿಗಳು ಆದ ಕಾರಣ ಜನರು ನಮ್ಮನ್ನು ನೋಡುತ್ತಿರುತ್ತಾರೆ ಎಂದು ಸಲೀಮ್ ಖಾನ್ ತಿಳಿಸಿದ್ದಾರೆ.