ಹೈದರಾಬಾದ್: ಕೊನೆಯ ಓವರಿನ ಕೊನೆಯ ಎಸೆತದಲ್ಲಿ ವೇಗದ ಬೌಲರ್ ಲಸಿತ್ ಮಾಲಿಂಗ ಶಾರ್ದೂಲ್ ಠಾಕೂರ್ ಅವರನ್ನು ಎಲ್‍ಬಿ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. 150 ರನ್‍ಗಳ ಗುರಿ ಪಡೆದ ಚೆನ್ನೈ ತಂಡವನ್ನು 149 ರನ್‍ಗಳಿಗೆ ಕಟ್ಟಿ ಹಾಕುವ ಮೂಲಕ ಮುಂಬೈ ತಂಡ 1 ರನ್‍ಗಳ ರೋಚಕ ಗೆಲುವನ್ನು ಪಡೆದುಕೊಂಡಿದೆ.
150 ರನ್ ಗಳ ಗುರಿಯನ್ನು ಪಡೆದ ಚೆನ್ನೈ ತಂಡಕ್ಕೆ ಕೊನೆಯ ಓವರ್ ನಲ್ಲಿ 9 ರನ್ ಬೇಕಿತ್ತು. ಮಾಲಿಂಗ ಎಸೆದ ಮೊದಲ ಎರಡು ಎಸೆತದಲ್ಲಿ ಎರಡು ರನ್ ಮೂರನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಮೂರು ಎಸೆತದಲ್ಲಿ 5 ರನ್ ಗಳಿಸುವ ಒತ್ತಡದಲ್ಲಿದ್ದಾಗ ವಾಟ್ಸನ್ ಎರಡು ರನ್ ಕದಿಯಲು ಹೋಗಿ ರನೌಟ್ ಆದರು.
Advertisement
Advertisement
ಇಲ್ಲಿಯವರೆಗೆ ಚೆನ್ನೈ ಪರ ಇದ್ದ ಪಂದ್ಯ ಮುಂಬೈ ಕಡೆ ವಾಲಿತು. ಕೊನೆಯ ಎರಡು ಎಸೆತದಲ್ಲಿ 4 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ಕ್ರೀಸ್‍ನಲ್ಲಿ ಶಾರ್ದೂಲ್ ಠಾಕೂರ್ 5ನೇ ಎಸೆತದಲ್ಲಿ ಎರಡು ರನ್ ಗಳಿಸಿದರು. ಈಗ ಪಂದ್ಯ ಟೈ ಆಗಿ ಸೂಪರ್ ಓವರಿಗೆ ಹೋಗುತ್ತಾ ಎನ್ನುವ ವಿಶ್ಲೇಷಣೆ ಕೇಳಿಬಂತು. ಎರಡು ತಂಡಗಳ ಅಭಿಮಾನಿಗಳ ಪ್ರಾರ್ಥನೆ ಜೋರಾಗಿತ್ತು. ಆದರೆ ಕೊನೆಯ ಎಸೆತವನ್ನು ವಿಕೆಟ್‍ಗೆ ಹಾಕುವ ಮೂಲಕ ಮಾಲಿಂಗ ಶಾರ್ದೂಲ್ ಠಾಕೂರ್ ಅವರನ್ನು ಎಲ್‍ಬಿ ಬಲೆಗೆ ಬೀಳಿಸಿದರು. ಈ ಮೂಲಕ ಮುಂಬೈ ಫೈನಲ್ ಸೇರಿದಂತೆ ಈ ಐಪಿಎಲ್‍ನಲ್ಲಿ ನಾಲ್ಕನೇಯ ಬಾರಿ ಚೆನ್ನೈ ತಂಡವನ್ನು ಸೋಲಿಸಿತು.
Advertisement
16ನೇ ಓವರ್ ನಲ್ಲಿ ಬ್ರಾವೋ ಸಿಕ್ಸರ್ ಸಿಡಿಸಿದರೆ ವಾಟ್ಸನ್ ಹ್ಯಾಟ್ರಿಕ್ ಫೋರ್ ಹೊಡೆದಿದ್ದರು. ಮಾಲಿಂಗ ಎಸೆದ ಈ ಓವರ್‍ನಲ್ಲಿ ಚೆನ್ನೈ ತಂಡ 20 ರನ್ ಗಳಿಸಿತ್ತು. ನಂತರ ಕೃನಾಲ್ ಪಾಂಡ್ಯ ಎಸೆದ ಓವರಿನಲ್ಲಿ ವಾಟ್ಸನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. 19ನೇ ಓವರ್ ನಲ್ಲಿ ಬೂಮ್ರಾ ರನ್ ನಿಯಂತ್ರಿಸಿದರು. ಈ ಓವರ್ ನಲ್ಲಿ ಬ್ರಾವೋರನ್ನು ಔಟ್ ಮಾಡುವುದರ ಜೊತೆಗೆ 9 ರನ್ ನೀಡಿದರು. 4 ಓವರ್ ಗಳಲ್ಲಿ ಬುಮ್ರಾ 14 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಮುಂಬೈ ಗೆಲುವಿಗೆ ಸಹಕಾರಿಯಾದರು. 19ನೇ ಓವರ್ ನಲ್ಲಿ ಕೀಪರ್ ಕ್ವಿಂಟನ್ ಡಿ ಕಾಕ್ ಕೈಗೆ ಬಾಲ್ ಸಿಗದ ಕಾರಣ ಬೈ ರೂಪದಲ್ಲಿ 4 ರನ್ ಚೆನ್ನೈ ತಂಡಕ್ಕೆ ಸಿಕ್ಕಿತ್ತು.
Advertisement
ಆರಂಭಿಕನಾಗಿ ಬಂದು ಕೊನೆಯ ಓವರ್ ನಲ್ಲಿ ಔಟಾದ ವಾಟ್ಸನ್ 80 ರನ್(59 ಎಸೆತ, 8 ಬೌಂಡರಿ, 4 ಸಿಕ್ಸರ್) ಹೊಡೆದು ರನೌಟ್ ಆದರೆ ಡು ಪ್ಲೆಸಿಸ್ 26 ರನ್ ಹೊಡೆದು ಔಟಾದರು. ಧೋನಿ ಅನಗತ್ಯ ಎರಡು ರನ್ ಕದಿಯಲು ಹೋಗಿ ರನೌಟ್ ಆಗಿದ್ದು ಚೆನ್ನೈ ತಂಡಕ್ಕೆ ಮುಳುವಾಯಿತು. ಅಂತಿಮವಾಗಿ ಚೆನ್ನೈ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು.
ಸಾಧಾರಣ ಮೊತ್ತ:
ಮುಂಬೈ ತಂಡದ ಆರಂಭ ಉತ್ತಮವಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‍ಮನ್‍ಗಳು ಬಿರುಸಿನ ಆಟಕ್ಕೆ ಮುಂದಾಗದ ಕಾರಣ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‍ಗೆ 4.5 ಓವರ್ ಗಳಲ್ಲಿ 45 ರನ್ ಹೊಡೆದಿದ್ದರು. 3 ಎಸೆತಗಳ ಅಂತರದಲ್ಲಿ ಇವರಿಬ್ಬರು ಔಟಾದ ಕಾರಣ ರನ್ ವೇಗಕ್ಕೆ ಕಡಿವಾಣ ಬಿತ್ತು.
ಕಾಕ್ 29 ರನ್(17 ಎಸೆತ, 4 ಸಿಕ್ಸರ್) ರೋಹಿತ್ ಶರ್ಮಾ 15 ರನ್, ಇಶಾನ್ ಕೃಷ್ಣನ್ 23 ರನ್ ಹೊಡೆದರು. ಕೊನೆಯಲ್ಲಿ ಕೀರನ್ ಪೊಲಾರ್ಡ್ ಔಟಾಗದೇ 41 ರನ್(25 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ ಹಾರ್ದಿಕ್ ಪಾಂಡ್ಯ 16 ರನ್(10 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
ದೀಪಕ್ ಚಹರ್ ಒಂದು ಮೇಡನ್ ಓವರ್ 26 ರನ್ ನೀಡಿ 3 ವಿಕೆಟ್ ಪಡೆದರೆ, ಇಮ್ರಾನ್ ತಾಹೀರ್ 23 ರನ್ ರನ್ ನೀಡಿ 2 ವಿಕೆಟ್ ಕಿತ್ತರು. ಶಾರ್ದೂಲ್ ಠಾಕೂರ್ 37 ರನ್ ನೀಡಿ 2 ವಿಕೆಟ್ ಪಡೆದರು.
Unprecedented scenes from Hyderabad as @mipaltan became #VIVOIPL champs for the 4⃣th time!
Lasith Malinga showing his true class in the last over ????#MIvCSK pic.twitter.com/ZzVK0KHx5O
— IndianPremierLeague (@IPL) May 12, 2019