Connect with us

Latest

ಮೃತ ಯುವತಿಯ ಹೃದಯವೇ ಕಾಣೆ- ಅರ್ಧಕ್ಕೆ ನಿಂತ ನಿಗೂಢ ಸಾವಿನ ತನಿಖೆ

Published

on

ಮುಂಬೈ: 5 ವರ್ಷಗಳ ಹಿಂದೆ ನಡೆದ ಯುವತಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಈಗ ಅರ್ಧಕ್ಕೆ ನಿಂತಿದೆ. ಕಾರಣ ಮೃತ ಯುವತಿಯ ಹೃದಯ ಕಾಣೆಯಾಗಿದೆ.

2012ರಲ್ಲಿ ತನ್ನ 19ನೇ ಹುಟ್ಟುಹಬ್ಬದ ದಿನದಂದೇ ಯುವತಿ ಸನಮ್ ಸಾವನ್ನಪ್ಪಿದ್ದಳು. ಆಕೆಯ ಸಾವಿನ ತನಿಖೆಗೆ ಈಗ ತೊಡಕುಂಟಾಗಿದೆ. ಯಾವುದೋ ವಯಸ್ಸಾದ ಮಹಿಳೆಯ ಹೃದಯವನ್ನ ಪರೀಕ್ಷೆಗೆ ನೀಡಲಾಗಿದೆ ಎಂದು ಕೆಲವು ವಾರಗಳ ಹಿಂದೆ ಹೈದರಾಬಾದ್‍ನ ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿದ ಬಳಿಕವಷ್ಟೆ ಯುವತಿಯ ಹೃದಯ ಕಾಣೆಯಾಗಿರೋದು ಬಹಿರಂಗಾವಗಿದೆ. ಇದೀಗ ಕಾಡ್ತಿರೋ ಅನೇಕ ಪ್ರಶ್ನೆಗಳಿಗೆ ಸನಮ್ ಪೋಷಕರು ಉತ್ತರ ಹುಡುಕುತ್ತಿದ್ದಾರೆ.

ಬೇಕಂತಲೇ ಬದಲಾಯಿಸಿದ್ದಾರೆ: ಸನಮ್ ತಾಯಿ ನಾಗಿನಾ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಯಾರೋ ಬೇಕೆಂತಲೇ ತನಿಖೆಗೆ ತೊಂದರೆ ಮಾಡಲು ನನ್ನ ಮಗಳ ಹೃದಯವನ್ನ ಬದಲಾಯಿಸಿದ್ದಾರೆ. ಈ ರೀತಿ ಆಗಿರೋದು ಇದೇ ಮೊದಲೇನಲ್ಲ. ಮೊದಲ ಬಾರಿ ಪರೀಕ್ಷೆಗೆ ಯಾವುದೋ ಪುರುಷನ ಹೃದಯವನ್ನ ನೀಡಲಾಗಿದೆ ಅಂತ ಕಲಿನಾದ ವಿಧಿ ವಿಜ್ಞಾನ ಪ್ರಯೋಗಾಲಯ ಪತ್ತೆ ಮಾಡಿತ್ತು ಎಂದಿದ್ದಾರೆ. ನೇರವಾಗಿ ಅಥವಾ ಪರೋಕ್ಷವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಯಾರೋ ಪ್ರಭಾವಿ ವ್ಯಕ್ತಿಯೇ ಇದರ ಹಿಂದೆ ಇರಬಹುದು. ಒಂದು ಬಾರಿ ಆಗಿದ್ದರೆ ಏನೋ ತಪ್ಪಾಗಿ ಆಗಿರಬಹುದು ಎಂದು ಅರ್ಥಮಾಡಿಕೊಳ್ಳುತ್ತಿದ್ವಿ. ಆದ್ರೆ ಎರಡು ಬಾರಿ ಹೀಗಾಗಿದೆ. ಸನಮ್ ಹೃದಯ ಎಲ್ಲಿದೆ ಅನ್ನೋದೇ ಗೊತ್ತಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ಅಡಚಣೆ ಉಂಟು ಮಾಡಲೆಂದು ಬೇಕಂತಲೇ ಈ ರೀತಿ ಮಾಡಲಾಗಿದೆ ಎಂದು ನಾಗಿನಾ ಹೇಳಿದ್ದಾರೆ.

ಹೃದಯ ಸಿಗದೆ ತನಿಖೆ ಅಸಾಧ್ಯ: ಯುವತಿಯ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ ಕಾಣೆಯಾಗಿರೋ ಅಂಗವಾದ ಹೃದಯವೇ ಈ ಪ್ರಕರಣದಲ್ಲಿ ಬಹುಮುಖ್ಯವಾದುದು. ಯುವತಿ 2012ರಲ್ಲಿ ಸಾವನ್ನಪ್ಪಿದಾಗ ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ರಕ್ತಕೊರತೆಯ ಹೃದಯರೋಗದ ಜೊತೆ ಮದ್ಯಪಾನದಿಂದ ಯುವತಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು. ಅಲ್ಲದೆ ಯುವತಿಯ ಹೃದಯದಲ್ಲಿ ಶೇ.70ರಷ್ಟು ಬ್ಲಾಕೇಜ್ ಇದೆ ಎಂದು ಹೇಳಲಾಗಿತ್ತು. ವೀರ್ಯ ಪತ್ತೆಯಾಗಿದ್ದು, ಸಾವಿಗೂ ಮುನ್ನ ಲೈಂಗಿಕ ಸಂಪರ್ಕ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಆದ್ರೆ ಇದನ್ನ ಯುವತಿಯ ಪೋಷಕರು ನಿರಾಕರಿಸಿದ್ದರು. ವಿಧಿ ವಿಜ್ಞಾನ ಪರೀಕ್ಷೆ ಮಾಡಲಾದ ಹೃದಯ ತಮ್ಮ ಮಗಳದ್ದೇ ಎಂದು ಸಾಬೀತುಪಡಿಸಲು ಡಿಎನ್‍ಎ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ರು.

ಹೃದಯ ಸಂಬಂಧಿ ಕಾಯಿಲೆ ಹಾಗೂ ಮದ್ಯಪಾನದಿಂದ ಸನಮ್ ಸಾವನ್ನಪ್ಪಿದ್ದಾಳೆಂಬ ವಾದವನ್ನ ಆಕೆಯ ಪೋಷಕರು ತಳ್ಳಿಹಾಕಿದ್ದಾರೆ. ಆದ್ರೆ ಆಕೆಯ ಹೃದಯವನ್ನ ಪರೀಕ್ಷೆಗೆ ಒಳಪಡಿಸದೆ ಸಾವಿಗೆ ನಿಖರವಾದ ಕಾರಣವನ್ನ ಪತ್ತೆ ಮಾಡಲು ಸಾಧ್ಯವಿಲ್ಲ. ತಜ್ಞರಿಂದ ಅಭಿಪ್ರಾಯ ಪಡೆಯಲು ಹೃದಯವನ್ನ ಮೆಡಿಕಲ್ ಬೋರ್ಡ್‍ಗೆ ಕಳಿಸಬಹುದಿತ್ತು. ಆದ್ರೆ ಈಗ ಅಂಗವೇ ಕಾಣೆಯಾಗಿರೋದ್ರಿಂದ ಈ ವಾದಕ್ಕೆ ಉತ್ತರ ಹುಡುಕಲು ಸಾಧ್ಯವಿಲ್ಲ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೃದಯರೋಗವೇ ಇರಲಿಲ್ಲ: ನಮ್ಮ ಸನಮ್‍ಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ. ಆಕೆ ಫುಟ್‍ಬಾಲ್ ಆಟಗಾರ್ತಿಯಾಗಿದ್ದಳು. ಆಕೆ ಸಾವನ್ನಪ್ಪಿದ 12 ದಿನಗಳ ಹಿಂದೆ ಕಾಲೇಜ್ ಟೂರ್ನ್ ಮೆಂಟ್‍ನಲ್ಲಿ ಭಾಗವಹಿಸಿದ್ದಳು. ಅಲ್ಲದೆ ಘಟನೆಯ ಹಿಂದಿನ ದಿನ ಜಿಮ್‍ನಲ್ಲಿ ಕಾರ್ಡಿಯೋ ಎಕ್ಸರ್ಸೈಸ್ ಮಾಡಿದ್ದಳು. ನಾವು ಮರಣೋತ್ತರ ಪರೀಕ್ಷೆಯ ವರದಿಯನ್ನು ನಂಬಲು ಸಿದ್ಧವಿರಲಿಲ್ಲ. ಹೀಗಾಗಿ ಹೃದಯದ ಡಿಎನ್‍ಎ ಪರೀಕ್ಷೆಗೆ ಒತ್ತಾಯಿಸಿದ್ದೆವು. ಜೊತೆಗೆ ವೀರ್ಯದ ಡಿಎನ್‍ಎ ಪರೀಕ್ಷೆ ನಡೆಸುವಂತೆಯೂ ಕೇಳಿದ್ದೆವು ಎಂದು ಸನಮ್ ಪೋಷಕರು ಹೇಳಿದ್ದಾರೆ.

2 ಬಾರಿ ಹೃದಯ ಬದಲಾವಣೆ: ಸನಮ್ ಪೋಷಕರ ಒತ್ತಾಯದ ಮೇಲೆ ಯುವತಿಯ ಮೃತದೇಹದ ಒಳಾಂಗಗಳನ್ನು ಕಲೀನಾ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಆಗ ಹೃದಯವು ಪುರುಷನದ್ದು ಎಂದು ವೈದ್ಯರು ದೃಢಪಡಿಸಿದ್ದರು. ಕಳೆದ ವರ್ಷ ಈ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿತ್ತು. 2016ರ ಆಗಸ್ಟ್‍ನಲ್ಲಿ ಹಾಗೂ ಇದೇ ವರ್ಷ ಜನವರಿಯಲ್ಲಿ ಸಿಬಿಐ ಸನಮ್ ಮೃತದೇಹವನ್ನು ಹೊರತೆಗೆಸಿತ್ತು. ಮೃತದೇಹದ ಅವಶೇಷಗಳು ಯುವತಿಯದ್ದೇ ಎಂದು ಡಿಎನ್‍ಎ ಪರೀಕ್ಷೆ ವರದಿಯಲ್ಲಿ ದೃಢವಾಗಿತ್ತು. ನಂತರ ಸಿಬಿಐ ಯುವತಿಯ ಒಳಾಂಗಳನ್ನು ಪರೀಕ್ಷೆಗಾಗಿ ಹೈದರಾಬಾದ್‍ಗೆ ಕಳಿಸಿತ್ತು. ಆದ್ರೆ ಈ ಬಾರಿ ಹೃದಯವು ವಯಸ್ಸಾದ ಮಹಿಳೆಯದ್ದು ಎಂದು ಪತ್ತೆಯಾಗಿದೆ. ಆದರೂ ಉಳಿದ ಅಂಗಗಳಾದ ಕಿಡ್ನಿ, ಲಿವರ್, ಸ್ಪೀನ್…ಇತ್ಯಾದಿ ಕುಟುಂದ ಡಿಎನ್‍ಎಗೆ ಹೊಂದಿಕೆಯಾಗಿವೆ.

ಸನಮ್ ಹೃದಯ ಕಾಣೆಯಾಗಿರೋದೇ ನಮಗೆ ದೊಡ್ಡ ಸವಾಲಾಗಿದೆ. ನಾವು ಮೃತದೇಹವನ್ನ ಹೊರತೆಗೆಸಿದೆವು. ಡಿಎನ್‍ಎ ಕೂಡ ಆಕೆಯ ಪೋಷಕರೊಂದಿಗೆ ಹೊಂದಿಕೆಯಾಗಿತ್ತು. ಹೀಗಾಗಿ ಸಮಾಧಿ ಸನಮ್‍ಳದ್ದೇ ಎಂಬುದು ಸ್ಪಷ್ಟವಾಗಿತ್ತು. ಆದ್ರೆ ಈಗ ಆಕೆಯ ಹೃದಯ ಎಲ್ಲಿ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

2012ರ ಫ್ಲ್ಯಾಶ್‍ಬ್ಯಾಕ್: ಸನಮ್ ಪುಣೆಯ ಸಿಂಬೋಸಿಸ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಫ್ಯಾಶನ್ ಡಿಸೈನಿಂಗ್ ಅಂಡ್ ಕಮ್ಯನಿಕೇಷನ್ ವಿದ್ಯಾರ್ಥಿನಿಯಾಗಿದ್ದಳು. 2012ರ ಅಕ್ಟೋಬರ್ 12ರಂದು ಆಕೆಯ ಹುಟ್ಟುಹಬ್ಬ. ಮನೆಯಲ್ಲಿ ಕೇಕ್ ಕತ್ತರಿಸಿದ್ದಷ್ಟೇ ಆಕೆಯ ಪೋಷಕರಿಗೆ ಇರುವ ಕೊನೆಯ ನೆನಪು. ಬಳಿಕ ಸನಮ್ ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದಳು. ಮರುದಿನ ಬೆಳಿಗ್ಗೆ ತಮ್ಮ ಮಗಳು ಆಸ್ಪತ್ರೆಯಲ್ಲಿರುವುದಾಗಿ ಸನಮ್ ಪೋಷಕರಿಗೆ ಮಾಹಿತಿ ಬಂದಿತ್ತು. ಅವರು ಆಸ್ಪತ್ರೆಗೆ ಹೋಗುವ ವೇಳೆಗೆ ಸನಮ್ ಸಾವನ್ನಪ್ಪಿದ್ದಳು. ಆಸ್ಪತ್ರೆಯಲ್ಲಿ ಆಕೆಯ ಸ್ನೇಹಿತರ್ಯಾರೂ ಇರಲಿಲ್ಲ.

ಯಾರು ಹೊಣೆ: ಅಂದು ರಾತ್ರಿ ಸನಮ್ ಜೊತೆಗಿದ್ದ ಸ್ನೇಹಿತರನ್ನ ಸಿಬಿಐ ತಂಡ ವಿಚಾರಣೆ ಮಾಡಿದೆ. ಆದ್ರೆ ಅವರು 2012ರಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನೀಡಿದ್ದ ಹೇಳಿಕೆಗಳಲ್ಲಿ ಭಿನ್ನತೆಯಿರೋದು ಗೊತ್ತಾಗಿದೆ. ಸನಮ್ ಹೃದಯವನ್ನು ಬದಲಾವಣೆ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ತೀರಾ ಎಂಬ ಪ್ರಶ್ನೆಗೆ, ನಮ್ಮ ತನಿಖೆ ಮುಂದುವರೆದಿದೆ. ಸನಮ್ ಹೃದಯವನ್ನ ಬೇಕಂತಲೇ ಬದಲಾವಣೆ ಮಾಡಲಾಗಿದ್ಯಾ ಅಥವಾ ತಪ್ಪಾಗಿ ಆಗಿದ್ಯಾ ಎಂದು ಪತ್ತೆ ಮಾಡುತ್ತಿದ್ದೇವೆ ಎಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊಲೆಯೋ, ಸಹಜ ಸಾವೋ?: ಸನಮ್ ಹೃದಯ ಪತ್ತೆಯಾಗದ ಹೊರತು ಪೊಲೀಸರು ಇದನ್ನ ಕೊಲೆ ತನಿಖೆ ಎಂದು ಕೂಡ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಹಜ ಸಾವು ಎಂದು ಹೇಳಿದ್ದಾರೆ. ಆದ್ರೆ ಸನಮ್ ಹೃದಯ ಸಿಗದೆ ನಾವು ಇದು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉತ್ತರ ಸಿಗದ ಪ್ರಶ್ನೆಗಳು:
> ಸನಮ್ ಸ್ನೇಹಿತರು ಆಸ್ಪತ್ರೆಯಲ್ಲಿ ಅಥವಾ ಅಂತ್ಯಸಂಸ್ಕಾರದ ವೇಳೆ ಯಾಕೆ ಇರಲಿಲ್ಲ?
> ಸನಮ್ ಫೋನ್ ಮೆಮೊರಿ ಸಂಪೂರ್ಣವಾಗಿ ಕ್ಲೀನ್ ಮಾಡಿದ್ದು ಯಾರು?
> ಆಕೆಯ ಫೋನ್‍ನಲ್ಲಿದ್ದ 8 ಜಿಬಿ ಮೆಮೊರಿ ಕಾರ್ಡ್ ಜಾಗದಲ್ಲಿ 2 ಜಿಬಿ ಕಾರ್ಡ್ ಬದಲಿಸಿದ್ದು ಯಾರು?
> ಮರಣೋತ್ತರ ಪರೀಕ್ಷೆಯ ವೇಳೆ ವೈದ್ಯರು ದೇಹದ ಪ್ರಮುಖ ಅಂಗಗಳ ಫೋಟೋ ಯಾಕೆ ತೆಗೆದಿರಲಿಲ್ಲ.
> ಅಧಿಕಾರಿಗಳು ಸನಮ್ ಹೃದಯದ ಜಾಗದಲ್ಲಿ ಪುರುಷನ ಹೃದಯ ಬದಲಾಯಿಸಿದ್ದು ಹೇಗೆ?
> ಎರಡನೇ ಬಾರಿಯೂ ಸನಮ್ ಹೃದಯ ಬದಲಾವಣೆ ಆದದ್ದು ಹೇಗೆ?

Click to comment

Leave a Reply

Your email address will not be published. Required fields are marked *