ಇಎಸ್‍ಐಸಿ ಆಸ್ಪತ್ರೆಯಲ್ಲಿ ಬೆಂಕಿ – 6 ಮಂದಿ ಸಾವು, 140ಕ್ಕೂ ಹೆಚ್ಚು ಮಂದಿಯ ರಕ್ಷಣೆ

Public TV
1 Min Read
MUMBAI ESIC HOSPITAL

ಮುಂಬೈ: ರಾಜ್ಯ ನೌಕರರ ವಿಮಾ ನಿಗಮ (ಇಎಸ್‍ಐಸಿ) ಆಸ್ಪತ್ರೆಯಲ್ಲಿ ಬೆಂಕಿ ದುರಂತ ಸಂಭವಿಸಿ 6 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದ ಅಂಧೇರಿಯ ಮಾರೊಲ್ ಪ್ರದೇಶದಲ್ಲಿ ನಡೆದಿದೆ.

ESIC HOSPITAL MUMBAI

ಇಂದು ಸಂಜೆ 4.30ರ ವೇಳೆ ಇಎಸ್‍ಐಸಿ ಕಾಮ್‍ಗರ್ ಆಸ್ಪತ್ರೆಯ 3ನೇ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ 6 ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಆಗಮಿಸಿದ್ದು, ಭರದಿಂದ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಇದೂವರೆಗೂ ಆಸ್ಪತ್ರೆಯಿಂದ ಒಟ್ಟು 140 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಅಲ್ಲದೇ ರೋಗಿಗಳನ್ನು ಬೇರೊಂದು ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳ ಮುಖ್ಯಸ್ಥ ಪಿ ರಹಂಗ್ದಾಳೆ, ಸಂಪೂರ್ಣ ಕಟ್ಟಡ ಹೊಗೆಯಿಂದ ಆವೃತಗೊಂಡಿದೆ. ಆಸ್ಪತ್ರೆಯಲ್ಲಿ ಹಲವಾರು ರೋಗಿಗಳು ಸಿಲುಕಿಕೊಂಡಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಕಟ್ಟಡದ ಮೇಲ್ಭಾಗಕ್ಕೆ ತೆರಳಿದ್ದರು. ಸದ್ಯ ಅವರನ್ನು ರಕ್ಷಿಸುತ್ತಿದ್ದೇವೆಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article