Latest
20 ಮುಂಬೈ ವೈದ್ಯರು, 12 ಗಂಟೆ ನಿರಂತರ ಸರ್ಜರಿ ಮಾಡಿ ಸಯಾಮಿ ಮಕ್ಕಳನ್ನ ಬೇರೆ ಮಾಡಿದ್ರು!

ಮುಂಬೈ: ಒಂದು ವರ್ಷಗಳ ಕಾಲ ಅಂಟಿಕೊಂಟಿದ್ದ ಸಯಾಮಿ ಮಕ್ಕಳನ್ನು 20 ವೈದ್ಯರು 12 ಗಂಟೆಗಳ ಕಾಲ ನಿರಂತರವಾಗಿ ಸರ್ಜರಿ ಮಾಡಿ ಬೇರೆ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿ ಮತ್ತು ರಾಣಿ ಅಂಟಿಕೊಂಡಿದ್ದ ಅವಳಿ ಮಕ್ಕಳು. ವಾಡಿಯಾ ಆಸ್ಪತ್ರೆಯ 20 ವೈದ್ಯರು ಸೇರಿ ಮಂಗಳವಾರ ಆಪರೇಷನ್ ಮಾಡಿ ಬೇರೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಆಸ್ಪತ್ರೆ ಎರಡನೇ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸು ಕಂಡಿರುವುದು ವಿಶೇಷ.
ಗರ್ಭಿಣಿಯಾಗಿ 5 ತಿಂಗಳಾದ ಮೇಲೆ ಭ್ರೂಣದಲ್ಲಿ ಅವಳಿ ಮಕ್ಕಳು ಇರುವುದು ನನಗೆ ಗೊತ್ತಾಯಿತು. ಅಷ್ಟೇ ಅಲ್ಲದೇ ಇಬ್ಬರ ದೇಹ ಅಂಟಿಕೊಂಡಿರುವ ವಿಚಾರವೂ ತಿಳಿಯಿತು. 2016 ಸೆಪ್ಟಂಬರ್ 19 ರಂದು ನಾನು ಇಬ್ಬರು ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದೆ. ಈ ಸಂದರ್ಭದಲ್ಲಿ ಯಕೃತ್, ಕರಳು ಮತ್ತು ಮೂತ್ರಕೋಶವನ್ನ ಮಕ್ಕಳು ಹಂಚಿಕೊಂಡಿರುವುದು ತಿಳಿಯಿತು. ಹೀಗಾಗಿ ಅವರ ಆರೋಗ್ಯದ ಬಗ್ಗೆ ನಾನು ಭಯಪಟ್ಟಿದ್ದೆ. ಆದರೆ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಮಾಡುವ ಮೊದಲು ವಿಶೇಷ ಪರೀಕ್ಷೆ ನಡೆಸಲಾಗಿತ್ತು ಎಂದು ತಾಯಿ ಶೀತಲ್ ಜಾಲ್ಟೆ ತಿಳಿಸಿದರು.
1 ವರ್ಷ 3 ತಿಂಗಳ ಪ್ರೀತಿ ಮತ್ತು ರಾಣಿ ಅವಳಿ ಮಕ್ಕಳು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯಕ್ಕೆ ಈ ಮಕ್ಕಳು ಐಸಿಯುನಲ್ಲಿ ಇದ್ದು, ಕೆಲ ಕೆಲವು ದಿನಗಳವರೆಗೆ ಇಲ್ಲೇ ಇರಬೇಕಾಗುತ್ತದೆ. ನಂತರ ಅವರ ಆರೋಗ್ಯ ಸ್ಥಿತಿಯನ್ನ ತಿಳಿದುಕೊಳ್ಳಲು ಅನೇಕ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮಕ್ಕಳನ್ನು ಚರ್ಮದ ಮೂಲಕ ಕವರ್ ಮಾಡುವುದು ನಮಗೆ ಸವಾಲಿನ ಕೆಲಸವಾಗಿತ್ತು. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಾದ ಬಳಿಕ ಘಾಟ್ಕೋಪಾರ್‍ದಲ್ಲಿರುವ ಜಾಲ್ಟೆ ಕುಟುಂಬ ಇಬ್ಬರು ಮಕ್ಕಳನ್ನು ನೋಡಿ ತುಂಬಾ ಸಂತೋಷಗೊಂಡಿದ್ದಾರೆ ಎಂದು ವಾಡಿಯಾ ಆಸ್ಪತ್ರೆಯ ಸಿಇಓ ಡಾ. ಮಿನ್ನೆ ಬೊಧಾನ್ವಾಲಾ ಹೇಳಿದರು.
