ಮುಂಬೈ: ತಮಿಳು ಚಿತ್ರರಂಗದಲ್ಲಿ ಯಶಸ್ವಿ ನಾಯಕನಾಗಿ ಮಿಂಚುತ್ತಿರುವ ಧನುಷ್ ಅವರು ಸ್ಟಾರ್ ನಟನೊಂದಿಗೆ ಬಾಲಿವುಡ್‍ಗೆ ಮತ್ತೆ ರೀ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.
2013ರಲ್ಲಿ ಬಿಡುಗಡೆಯಾದ ರಾಂಜನ್ ಚಿತ್ರದ ಮೂಲಕ ಬಾಲಿವುಡ್‍ಗೆ ಮೊದಲ ಬಾರಿ ಎಂಟ್ರಿಕೊಟ್ಟಿದ್ದ ಧನುಷ್, ನಂತರ 2015ರಲ್ಲಿ ಬಿಗ್‍ಬಿ ಅಮಿತಾ ಬಚ್ಚನ್ ಜೊತೆ ಶಮಿತಾಭ್ ಸಿನಿಮಾ ಮಾಡಿದ್ದರು. ನಂತರ ಹಿಂದಿ ಚಿತ್ರದಲ್ಲಿ ಅಷ್ಟೇನು ಕಾಣಿಸಿಕೊಂಡಿರಲಿಲ್ಲ. ಈಗ 5 ವರ್ಷದ ನಂತರ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಜೊತೆ ನಟಿಸಲು ಸಿದ್ಧವಾಗಿದ್ದಾರೆ. ಈ ಮೂಲಕ ಬಾಲಿವುಡ್‍ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.
ಹೌದು ಕಾಲಿವುಡ್‍ನಲ್ಲಿ ಅಸುರನ್, ಪಟಾಸ್ ಚಿತ್ರಗಳ ಯಶಸ್ಸಿನ ನಂತರ ಧನುಷ್ ಅವರು, ಬಾಲಿವುಡ್‍ನಲ್ಲಿ ಸ್ಟಾರ್ ಡೈರೆಕ್ಟರ್ ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿರುವ ಅತ್ರಂಗಿ ರೇ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಧನುಷ್ ಜೊತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಟಿಸಲಿದ್ದಾರೆ. ಈ ಚಿತ್ರದ ನಾಯಕಿಯಾಗಿ ನಟ ಸೈಫ್ ಅಲಿಖಾನ್ ಅವರು ಮಗಳು ಸಾರಾ ಅಲಿಖಾನ್ ನಟಿಸಲಿದ್ದಾರೆ.
ಸದ್ಯ ಈ ಸಿನಿಮಾಗಾಗಿ ಚಿತ್ರತಂಡ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ನಾಯಕನಟಿ ಸಾರಾ ಅಲಿಖಾನ್ ಅವರಿಗೆ ಧನುಷ್ ಮತ್ತು ಅಕ್ಷಯ್ ಕುಮಾರ್ ಅವರು ಮುತ್ತಿಡುತ್ತಿರುವ ಫೋಟೋ ತುಂಬ ವೈರಲ್ ಆಗಿದೆ. ಇದು ಒಂದು ಮ್ಯೂಸಿಕಲ್ ಸಿನಿಮಾವಾಗಿದ್ದು, ಹಿಮಾಂಶು ಶರ್ಮಾ ಅವರು ಬರೆದಿರುವ ಕಥೆಯನ್ನು ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಧನುಷ್ ಅವರು, ಕಾಲಿವುಡ್‍ನಲ್ಲಿ ಸಖತ್ ಬೇಡಿಕೆಯ ನಟನಾಗಿದ್ದು, ಅವರ ನಟನೆಯ ಪಟಾಸ್ ಚಿತ್ರ ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈಗಾಗಲೇ ಧನುಷ್ ಕೈಯಲ್ಲಿ ಸುರಳಿ ಮತ್ತು ಕರ್ಣನ್ ಎಂಬ ಎರಡು ಚಿತ್ರಗಳು ಇದ್ದು, ಇವುಗಳ ಜೊತೆಗೆ ಅತ್ರಂಗಿ ರೇ ಚಿತ್ರವನ್ನು ಧನುಷ್ ಒಪ್ಪಿಕೊಂಡಿದ್ದಾರೆ. ಈ ಚಿತ್ರ ಧನುಷ್ ಅವರ 40 ನೇ ಸಿನಿಮಾವಾಗಿದ್ದು, ಮಾರ್ಚ್ 1 ರಿಂದ ಚಿತ್ರೀಕರಣ ಆರಂಭವಾಗಲಿದೆ.