ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಎರಡು ಮಹಾನಗರಗಳಲ್ಲಿ ಕೊರೊನಾ ಮೂರನೇ ಅಲೆ ಶುರುವಾಯ್ತು ಎನ್ನುವ ಅನುಮಾನಗಳನ್ನು ಹುಟ್ಟು ಹಾಕಿದೆ.
ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ಇಲ್ಲಿಂದ ವರದಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 238 ಪ್ರಕರಣಗಳು ಪತ್ತೆಯಾಗಿದ್ದು, 57 ಮಂದಿ ಚೇತರಿಸಿಕೊಂಡಿದ್ದಾರೆ. ಯಾವುದೇ ಅಂತರಾಷ್ಟ್ರೀಯ ಪ್ರಯಾಣಿಕರ ಮತ್ತು ಪ್ರಯಾಣದ ಹಿನ್ನೆಲೆ ಇಲ್ಲದವರಲ್ಲೂ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಸಮುದಾಯಕ್ಕೆ ಹಬ್ಬಿರುವ ಅನುಮಾನ ಮೂಡಿಸಿದೆ.
ನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ 496 ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದು, ಇದು ಈ ಮೊದಲು 50-100ಕ್ಕೆ ಸೀಮಿತವಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಶೇ.0.5ನಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಈಗ ಶೇ.1ಗೆ ಏರಿಕೆಯಾಗಿದೆ. ಸೋಂಕು ಮತ್ತಷ್ಟು ಹೆಚ್ಚುವ ಸುಳಿವು ನೀಡಿದೆ. ಇದನ್ನೂ ಓದಿ: ಆನೇಕಲ್‍ನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ದೃಢ – ರಾಜ್ಯದಲ್ಲಿ 39ಕ್ಕೇರಿದ ಸಂಖ್ಯೆ
ಸೋಂಕು ನಿಯಂತ್ರಣಕ್ಕೆ ದೆಹಲಿಯಲ್ಲಿ ಈಗಾಗಲೇ ಟಫ್ ರೂಲ್ಸ್ ಜಾರಿಯಾಗಿದೆ. ಪಾಸಿಟಿವಿಟಿ ಪ್ರಮಾಣ ಏರಿಕೆ ಹಿನ್ನೆಲೆ ಸರ್ಕಾರದಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಮೆಟ್ರೋದಲ್ಲಿ ಶೇ.50ರಷ್ಟು ಪ್ರಯಾಣಿಕರು ಸಂಚರಿಸಲು ಮಾತ್ರ ಅವಕಾಶ ನೀಡಿದೆ. ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಿತಿ ಹೇರಿದ್ದು, ಖಾಸಗಿ ಕಚೇರಿಗಳಲ್ಲೂ ಶೇ.50ರಷ್ಟು ಮಂದಿ ಕಾರ್ಯನಿರ್ವಾಹಿಸಲು ಅವಕಾಶ ನೀಡಿದೆ. ಮದುವೆ, ಅಂತ್ಯಕ್ರಿಯೆಯಲ್ಲಿ 20 ಮಂದಿಗೆ ಮಾತ್ರ ಭಾಗವಹಿಸುವಂತೆ ಷರತ್ತು ವಿಧಿಸಿದೆ.
ಮುಂಬೈನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿಯೂ ಏಳು ತಿಂಗಳ ಬಳಿಕ ಅತಿ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನಿನ್ನೆ ಒಂದೇ ದಿನಕ್ಕೆ 1333 ಪ್ರಕರಣಗಳು ದಾಖಲಾಗಿವೆ. ಕಳೆದ ಮೇ ಅಂತ್ಯದಲ್ಲಿ 1352 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ ಅತಿ ಹೆಚ್ಚು ಸಂಖ್ಯೆಯಾಗಿದೆ. ಕಳೆದ ಸೋಮವಾರ ಮುಂಬೈನಲ್ಲಿ 809 ಕೇಸ್ ಗಳು ವರದಿಯಾಗಿತ್ತು. ಈಗ 1333 ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ ಒಂದೇ ದಿನಕ್ಕೆ ದುಪ್ಪಟ್ಟಾಗಿದೆ. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ
ಮುಂಬೈನಲ್ಲಿ ಈಗ ಪಾಸಿಟಿವಿಟಿ ಪ್ರಮಾಣ ಶೇ.4.11ಕ್ಕೆ ಏರಿಕೆಯಾಗಿದ್ದು, ಓಮಿಕ್ರಾನ್ ಸಂಖ್ಯೆ ಕೂಡಾ ಏರುತ್ತಿದೆ. ಮಹಾರಾಷ್ಟ್ರದಲ್ಲಿ 167 ಪ್ರಕರಣಗಳು ವರದಿಯಾಗಿದ್ದು, 72 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕು ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಹೊಸ ವರ್ಷಚಾರಣೆಯನ್ನು ಸಾಮೂಹಿಕವಾಗಿ ಆಚರಿಸಲು ಸರ್ಕಾರ ಬ್ರೇಕ್ ಹಾಕಿದೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಮುಂಬೈ ದೆಹಲಿಯಲ್ಲಿ ಸೋಂಕು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಮೂರನೇ ಅಲೆ ಮಹಾನಗರಗಳಲ್ಲಿ ಶುರುವಾಯ್ತ ಎನ್ನುವ ಅನುಮಾನ ಮೂಡಿಸಿದೆ.