Connect with us

Crime

ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ ಹೆಂಡ್ತಿ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಮುಖಕ್ಕೆ ಆ್ಯಸಿಡ್ ಹಾಕ್ದ!

Published

on

ಮುಂಬೈ: ಮಹಿಳೆಯೊಬ್ಬರು ತೂಕ ಕಡಿಮೆ ಮಾಡಿಕೊಂಡು ಸಣ್ಣ ಆಗ್ಬೇಕು ಅಂತ ಬಯಸಿದ ಕಾರಣ ಆಕೆ ತನಗೆ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಪತಿರಾಯ ಆ್ಯಸಿಡ್ ದಾಳಿ ಮಾಡಿರೋ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ಇಲ್ಲಿನ ಮಾಲ್ವಾನಿ ನಿವಾಸಿಯಾದ ರುವಾಬ್ ಆಲಿ ಶೇಕ್(30) ತನ್ನ ಪತ್ನಿ ಝಾಕೀರಾ ಶೇಕ್(26) ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಈ ಘಟನೆ ಗುರುವಾರ ನಡೆದಿದ್ದು, ಘಟನೆಯಲ್ಲಿ ಈಕೆಯ ಇಬ್ಬರು ಮಕ್ಕಳಾದ ಅಫೀಪಾ(7) ಹಾಗೂ ಅತೀಫಾ(5) ಕೂಡ ಗಾಯಗೊಂಡಿದ್ದಾರೆ.

ಘಟನೆ ವಿವರ: ರುವಾಬ್ ಆಟೋ ಚಾಲಕನಾಗಿದ್ದು, ಝಾಕೀರಾ ಮನೆಯಲ್ಲೇ ಇದ್ದಳು. ಆದ್ರೆ ಮನೆ ಖರ್ಚಿಗೆ ರುವಾಬ್ ಝಾಕೀರಾಳಿಗೆ ಹಣ ನೀಡುತ್ತಿರಲಿಲ್ಲ. ಅಲ್ಲದೇ ರುವಾಬ್ ಮಾಟ, ಮಂತ್ರವನ್ನು ನಂಬುತ್ತಿದ್ದನು. ಅಂದ ಹಾಗೆ ಒರ್ವ ಮಂತ್ರವಾದಿ `ನೀನು ಈ ಮನೆಯಲ್ಲಿ ಈ ಪೂಜೆಯನ್ನು ಮಾಡಿದ್ರೆ ನಿಧಿ ಸಿಗತ್ತೆ ಅಂತ ನಂಬಿಸಿದ್ದ. ಒಟ್ಟಿನಲ್ಲಿ ಗಂಡನ ನಡವಳಿಕೆಗಳಿಂದ ಬೇಸತ್ತ ಝಾಕೀರಾ ಒಂದು ಸೇಲ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ರುವಾಬ್ ಹಾಗೂ ಝಾಕೀರ್ 2008ರಲ್ಲಿ ಮದುವೆಯಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಚೆನ್ನಾಗಿಯೇ ಇದ್ದ ದಂಪತಿಯ ಮಧ್ಯೆ ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಸಂಬಧಿಸಿದಂತೆ ಜಗಳಗಳಾಗುತ್ತಿತ್ತು ಅಂತ ಝಾಕೀರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ತೂಕ ಇಳಿಸಲು ಚಿಕಿತ್ಸೆ: ಝಾಕೀರಾ ಡುಮ್ಮಿಯಾಗಿದ್ದಳು. ಹೀಗಾಗಿ ತಾನು ಸ್ವಲ್ಪ ಸಣ್ಣ ಆಗ್ಬೇಕು ಅಂತಾ ತೂಕ ಕಡಿಮೆ ಮಾಡೋ ಚಿಕಿತ್ಸೆ ಪಡೆಯುತ್ತಿದ್ದಳು. ಇತ್ತ ಝಾಕೀರಾ ಸಣ್ಣ ಆಗುತ್ತಿರುವುದನ್ನು ಗಮನಿಸಿದ ಪತಿ ರುವಾಬ್ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದನು. ಯಾರಿಗಾಗಿ ನೀನು ಇದನ್ನೆಲ್ಲಾ ಮಾಡ್ತಾ ಇದ್ದೀಯಾ? ಯಾರಿಗೋಸ್ಕ ಸಣ್ಣ ಆಗ್ತಾ ಇದ್ದೀಯಾ? ಏನ್ ನಡೀತಾ ಇದೆ ಇಲ್ಲಿ ಅಂತೆಲ್ಲಾ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾನೆ.

ನೆರೆಮನೆಯಾತ ಹೇಳಿದ್ದೇನು?: ಗುರುವಾರ ಮುಂಜಾನೆ ನಾನು ಮನೆಯ ಹೊರಗಡೆ ಕುಳಿತಿದ್ದ ಸಂದರ್ಭದಲ್ಲಿ ಜೋರಾಗಿ ಕಿರುಚೋ ಶಬ್ದ ಕೇಳಿಸಿತ್ತು. ಏನಾಯ್ತು ಅನ್ನೋವಷ್ಟರಲ್ಲೇ ಝಾಕೀರಾ ಸಹಾಯ ಮಾಡಿ ಅಂತಾ ಕಿರುಚಿತ್ತಾ ಮನೆಯಿಂದ ಹೊರಗಡೆ ಓಡಿ ಬರುತ್ತಿರುವುದು ಕಂಡಿತು. ಅಲ್ಲೇ ಪಕ್ಕದಲ್ಲೇ ಆಕೆಯ ಸಹೋದರನ ಅಂಗಡಿಯಿತ್ತು. ಆತ ಅದರಲ್ಲೇ ಮಲಗುತ್ತಿದ್ದನು. ಹೀಗಾಗಿ ರಕ್ಷಣೆಗಾಗಿ ಸಹೋದರರನ್ನು ಕರೆಯುತ್ತಾ ಓಡಿ ಬಂದಿದ್ದಳು.

ಅಂತೆಯೇ ಸಹೋದರನ ಅಂಗಡಿಗೆ ಬಂದ ಝಾಕೀರಾ, ಶಟರ್ ಎಳೆಯುವಂತೆ ಬೇಡಿಕೊಳ್ಳುತ್ತಾಳೆ. ಆ ಕಡೆ ಸಹೋದರನೂ ಏನಾಯ್ತು ಅಂತಾ ಕೇಳಿ ಶಟರ್ ಎಳೆಯಲು ಹೋದ್ರೆ, ಅದನ್ನು ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ನಾನು ಕೂಡ ಅಲ್ಲಿಗೆ ತೆರಳಿ ಲಾಕ್ ಮುರಿದು ಸಹೋದರ ಹೊರಬರುವಂತೆ ಮಾಡಿದ್ವಿ. ಈ ಸಂದರ್ಭದಲ್ಲಿ ಝಾಕೀರಾ ಮೈ ನನ್ನ ಮೈಗೆ ತಾಗಿತ್ತು. ಪರಿಣಾಮ ಮೈ ಉರಿದ ಅನುಭವವಾಯ್ತು. ತಕ್ಷಣ ನೋಡಿದಾಗ ಆಕೆಯ ಮೇಲೆ ಆ್ಯಸಿಡ್ ದಾಳಿಯಾಗಿರುವುದು ತಿಳಿದುಬಂತು ಅಂತ ನೆರೆಮನೆಯ ಸಲೀಂ ಶೇಕ್ ಎಂಬಾತ ಮಾಧ್ಯಮಕ್ಕೆ ವಿವರಿಸಿದ್ದಾನೆ.

ಬಳಿಕ ಝಾಕೀರಾ ತನ್ನ ಮೇಲೆ ರುವಾಬ್ ಆ್ಯಸಿಡ್ ದಾಳಿ ಮಾಡಿರುವ ಕುರಿತು ಹೇಳಿದ್ದಾಳೆ. ದಾಳಿ ವೇಳೆ ಅಚಾನಕ್ ಆಗಿ ಮಕ್ಕಳ ಮೇಲೂ ಬಿದ್ದಿದೆ. ಬಳಿಕ ಆತ ಮನೆಯ ಹಿಂದಿನ ಬಾಗಿಲಿನ ಮೂಲಕ ಪರಾರಿಯಾಗಿರುವುದಾಗಿ ವಿವರಿಸಿದ್ದಾಳೆ.

ರುವಾಬ್ ಮೊದಲೇ ಈ ಯೋಜನೆ ಹಾಕಿದ್ದನು. ದಾಳಿ ಬಳಿಕ ಝಾಕೀರಾ ಸಹೋದರ ಆಸ್ಪತ್ರೆಗೆ ಕೂಡಲೇ ದಾಖಲಿಸಬಾರದೆಂದು ಆಕೆಯ ಸಹೋದರನ ಶಾಪ್ ಗೆ ಹೊರಗಡೆಯಿಂದ ಲಾಕ್ ಮಾಡಿದ್ದಾನೆ. ಘಟನೆಯ ನಂತ್ರ ಕುಟುಂಬಸ್ಥರು, ಝಾಕೀರಾ ಹಾಗೂ ಆಕೆಯ ಮಕ್ಕಳನ್ನು ಚಿಕಿತ್ಸೆಗಾಗಿ ಶತಾಬ್ಧಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಝಾಕೀರಾ ಸಹೋದರಿ ಸೈಮಾ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

ಪೊಲೀಸರಿಗೆ ಶರಣಾದ: ಪತ್ನಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದ ರುವಾಬ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲಿಸರಿಗೆ ಶರಣಾಗಿದ್ದಾನೆ. ರುವಾಬ್ ಬೆಳಗ್ಗೆ ಸುಮಾರು 6 ಗಂಟೆಯ ವೇಳೆ ಪೊಲೀಸ್ ಠಾಣೆ ಬಂದಿದ್ದು, ನನ್ನ ಮೇಲೆ ಪತ್ನಿ ಆ್ಯಸಿಡ್ ದಾಳಿ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ನಾನು ತಪ್ಪಿಸಿಕೊಂಡಿದ್ದು, ಪರಿಣಾಮ ಅದು ಅವಳ ಹಾಗೂ ಮಕ್ಕಳ ಮೇಲೆ ಬಿದ್ದಿದೆ ಅಂತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಝಾಕೀರಾ ಮುಖ ಶೇ.80ರಷ್ಟು ಸುಟ್ಟಿದ್ದು, ಚಿಕಿತ್ಸೆ ಮುಂದುವರೆದಿದೆ. ಮಕ್ಕಳು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಅವರಿಂದ ಹೇಳಿಕೆ ಪಡೆಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *