ಮುಂಬೈ: ನಗರದ ಜೀವನ ಶೈಲಿಗೆ ಹೊಂದಿಕೊಂಡಿಲ್ಲ ಎಂದು ತಂದೆಯೋರ್ವ ತಾನು ದತ್ತು ಪಡೆದಿದ್ದ 9 ವರ್ಷದ ಬಾಲಕಿಯನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.
38 ವರ್ಷದ ಪ್ರಕಾಶ್ ರಾಥೋಡ್ ದತ್ತುಪಡೆದ 9 ವರ್ಷದ ಮಗು ನಗರದ ಜೀವನ ಶೈಲಿಗೆ ಹೊಂದಿಕೊಳ್ಳುತ್ತಿಲ್ಲ. ಬಟ್ಟೆಗಳನ್ನು ಕೊಳೆ ಮಾಡಿಕೊಳ್ಳುತ್ತಾಳೆ ಎಂದು ಹೊಡೆದು ಸಾಯಿಸಿ ಡ್ರಮ್‍ನಲ್ಲಿ ತುಂಬಿ ದೊಡ್ಡ ಚರಂಡಿಗೆ ಎಸೆದಿದ್ದಾನೆ. ಮಗುವಿನ ನಿಜವಾದ ತಾಯಿ ಹಲವು ವಾರಗಳ ನಂತರವು ಮಗುವನ್ನು ಭೇಟಿ ಮಾಡಲು ಸಾಧ್ಯವಾಗದೆ ಇದ್ದಾಗ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ತಾಯಿ ನೀಡಿದ ದೂರಿನ ಮೇರೆಗೆ ವಿಚಾರಣೆ ಮಾಡಿದ ಪೊಲೀಸರಿಗೆ ದತ್ತು ಪಡೆದ ಪ್ರಕಾಶ್ ಮಗು ನಗರದ ಪದ್ಧತಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ಮಗುವನ್ನು ಹೊಡೆದು ಕೊಂದು ನಂತರ ತನ್ನ ಪತ್ನಿ ಮತ್ತು ಸಂಬಂಧಿಕರೊಬ್ಬರ ಸಹಾಯದಿಂದ ಮೃತದೇಹವನ್ನು ಒಂದು ಡ್ರಮ್ ಗೆ ತುಂಬಿ ಅದಕ್ಕೆ ಸಿಮೆಂಟ್ ಪ್ಲಾಸ್ಟರ್ ಮಾಡಿ ದೊಡ್ಡ ಚರಂಡಿಗೆ ಎಸೆದಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮಗುವಿನ ನಿಜವಾದ ತಾಯಿ ಬಡ ವಿಧವೆಯಾಗಿದ್ದು, ಆಕೆಯ ಸೋದರ ಸಂಬಂಧಿಯಾಗಿದ್ದ ಪ್ರಕಾಶ್ ರಾಥೋಡ್ ನಿನ್ನ ಮಗುವನ್ನು ದತ್ತು ಕೊಡು ನಾವು ಶ್ರೀಮಂತರಾಗಿದ್ದು, ನಗರದಲ್ಲಿ ನಿಮ್ಮ ಮಗಳನ್ನು ಬೆಳೆಸುತ್ತೇವೆ, ಓದಿಸುತ್ತೇವೆ ಎಂದು ಹೇಳಿದ್ದಾನೆ. ಊಟಕ್ಕೂ ಸಮಸ್ಯೆ ಇರುವ ನನ್ನ ಬಳಿ ನನ್ನ ಮಗಳು ಬೆಳೆಯುವುದು ಬೇಡ ನಗರದಲ್ಲಿ ಬೆಳೆದು ವಿದ್ಯಾವಂತೆಯಗಲಿ ಎಂಬ ಕನಸನ್ನು ಇಟ್ಟುಕೊಂಡು ಆಕೆ ಅವರಿಗೆ ತನ್ನ ಮಗಳನ್ನು ನೀಡಿದ್ದಾಳೆ.
ಮಗುವನ್ನು ದತ್ತು ಪಡೆದ ಪ್ರಕಾಶ್ ದಂಪತಿ ಮಗುವನ್ನು ಓದಿಸದೆ ದಿನಲೂ ಹೊಡೆಯುತ್ತಿದ್ದರು. ಮನೆ ಕೆಲಸ ಮಾಡಲು ಇಟ್ಟುಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದಲ್ಲದೇ ಆರೋಪಿ ಪ್ರಕಾಶ್ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಿದ್ದು, ಆ ಕೆಲಸ ಮಾಡಲು ಆ ಮಗು ಅವಳಿಗೆ ದಿನ ಸಹಾಯ ಮಾಡುತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಡಿಸೆಂಬರ್ 7 ರಂದು ಮಗು ಬಟ್ಟೆಯನ್ನು ಮಣ್ಣು ಮಾಡಿಕೊಂಡು ಬಂದಿದೆ ಎಂದು ಪ್ರಕಾಶ್ ಮಗುವಿಗೆ ತುಂಬ ಹೊಡೆದಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಆಗ ಮಗುವಿನ ಮೃತದೇಹವನ್ನು ಡ್ರಮ್ ಒಳಗೆ ಹಾಕಿ ಅದಕ್ಕೆ ಸಿಮೆಂಟ್ ತುಂಬಿ ಚರಂಡಿಗೆ ಎಸೆದಿದ್ದಾರೆ. ಈ ವಿಚಾರವಾಗಿ ಪ್ರಕಾಶ್ ಪತ್ನಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದ್ದು ಆರೋಪಿ ಪ್ರಕಾಶ್ ಪರಾರಿಯಾಗಿದ್ದಾನೆ.