ಮುಂಬೈ: ನವದೆಹಲಿಯಿಂದ ಮಹಾರಾಷ್ಟ್ರಕ್ಕೆ ಓಡಿಬಂದಿದ್ದ 14 ವರ್ಷದ ಬಾಲಕಿಯನ್ನು ಆಟೋ ಚಾಲಕ ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಹಾಯ ಮಾಡಿದ್ದಾನೆ.
ನವದೆಹಲಿ ಮೂಲದ 14ರ ಹರೆಯದ ಬಾಲಕಿಯೊಬ್ಬಳು ತನ್ನ ಪೋಷಕರ ಒತ್ತಡ ತಡೆಯಲಾರದೆ ಮನೆ ಬಿಟ್ಟು ಮಹಾರಾಷ್ಟ್ರಕ್ಕೆ ಓಡಿಬಂದಿದ್ದಾಳೆ. ಈ ವೇಳೆ ಮಹಾರಾಷ್ಟ್ರದಲ್ಲಿ ಆಟೋ ಚಾಲಕನೊಬ್ಬನಿಗೆ ನನಗೆ ಉಳಿದುಕೊಳ್ಳಲು ಒಂದು ರೂಮ್ ಬೇಕು ಎಂದು ಕೇಳಿದ್ದಾಳೆ. ಆಗ ಆಟೋ ಚಾಲಕನಿಗೆ ಸಂಶಯ ಬಂದು ಬಾಲಕಿಯನ್ನು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ತಕ್ಷಣವೇ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರ ಸಹಯದಿಂದ ಬಾಲಕಿಯನ್ನು ಪೋಷಕರೊಂದಿಗೆ ಸೇರಿಸಿದ್ದಾನೆ. ಇದನ್ನೂ ಓದಿ: ಮಂಗಗಳ ಕಾಟ – ಪಂಚಾಯ್ತಿ ಎಲೆಕ್ಷನ್ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧಾರ
ಘಟನೆ ವಿವರ:
ಶನಿವಾರ ಬೆಳಗ್ಗೆ ಆಟೋ ಚಾಲಕ ರಾಜು ಕರ್ವಾಡೆ(35) ಪಾಲ್ಘರ್‍ನ ವಸಾಯಿ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ ಬಾಲಕಿ ಆತನನ್ನು ಮಾತನಾಡಿಸಿದ್ದಾಳೆ. ಈ ಸ್ಥಳದಲ್ಲಿ ಉಳಿದುಕೊಳ್ಳಲು ರೂಮ್ ಸಿಗಬಹುದೇ ಎಂದು ಬಾಲಕಿ ಕೇಳಿದ್ದಾಳೆ. ರಾಜುವಿಗೆ ಅನುಮಾನ ಬಂದು ಬಾಲಕಿಯ ಗುರುತಿನ ಚೀಟಿಯನ್ನು ಪರಿಶೀಲಿಸಿ ಆಕೆಯನ್ನು ವಿಚಾರಿಸಿದ್ದಾನೆ. ಆಗ ಬಾಲಕಿ ತಾನು ನವದೆಹಲಿಯಿಂದ ಒಬ್ಬಳೇ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾಳೆ.
ತಕ್ಷಣ ಆಟೋ ಚಾಲಕ ಟ್ರಾಫಿಕ್ ಪೊಲೀಸರಿಗೆ ತಿಳಿಸಿದ್ದಾನೆ. ಅವರು ಬಾಲಕಿಯನ್ನು ಮಾಣಿಕ್‍ಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆಕೆ ಪೊಲೀಸರಿಗೆ, ನಾನು ನವದೆಹಲಿಯ ಪುಷ್ಪ ವಿಹಾರ್‍ನವಳಾಗಿದ್ದು, ನನ್ನ ತಾಯಿ ನನ್ನನ್ನು ಓದು ಎಂದು ಒತ್ತಡ ಹಾಕುತ್ತಿದ್ದರು. ಅದಕ್ಕೆ ನಾನು ಮನೆ ಬಿಟ್ಟು ಬಂದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಅವಳಿ ಎನ್‌ಕೌಂಟರ್‌ನಲ್ಲಿ ಜೆಇಎಂ ಕಮಾಂಡರ್ ಸೇರಿ ಐವರು ಉಗ್ರರ ಹತ್ಯೆ
ನಂತರ ಪೊಲೀಸರು ದೆಹಲಿಯ ಸಾಕೇತ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಬಾಲಕಿಯ ಪೋಷಕರು ಬಾಲಕಿ ಕಾಣಿಯಾಗಿರುವುದರ ಬಗ್ಗೆ ದೂರನ್ನು ನೀಡಿದ್ದರು. ಪೊಲೀಸರು, ಬಾಲಕಿ ಮಹಾರಾಷ್ಟ್ರದ ವಸೈದಲ್ಲಿ ಇರುವುದನ್ನು ತಿಳಿಸಿದ್ದಾರೆ. ತಕ್ಷಣ ಬಾಲಕಿಯ ಪೋಷಕರು ವಿಮಾನದಲ್ಲಿ ವಸೈಗೆ ತಲುಪಿದ್ದು, ಶನಿವಾರ ಪೊಲೀಸರು ಬಾಲಕಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನನ್ನು ಸನ್ಮಾನಿಸಲಾಯಿತು ಎಂದು ಹಿರಿಯ ಇನ್ಸ್‍ಪೆಕ್ಟರ್ ಭೌಸಾಹೇಬ್ ಹೇಳಿದ್ದಾರೆ.