ಮುಂಬೈ: 2008 ರ ಮುಂಬೈ ಭಯೋತ್ಪಾದಕ ದಾಳಿಯ (Mumbai Attack) ಸಂಚುಕೋರ ತಹವ್ವೂರ್ ರಾಣಾನನ್ನು (Tahawwur Rana) ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದು ಗುರುವಾರ ಬೆಳಗ್ಗೆ ಭಾರತಕ್ಕೆ (India) ಬರಲಿದ್ದಾನೆ.
ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ವಿಶೇಷ ತಂಡ ಈಗಾಗಲೇ ಅಮೆರಿಕದಿಂದ (USA) ವಿಮಾನದಲ್ಲಿ ಕರೆದುಕೊಂಡು ಬರುತ್ತಿದ್ದು ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ನ್ಯಾಯಾಲಯದ ಶಿಫಾರಸುಗಳಿಗೆ ಅನುಗುಣವಾಗಿ, ದೆಹಲಿ ಮತ್ತು ಮುಂಬೈನ ಎರಡು ಜೈಲುಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಜಾರಿ ಮಾಡಲಾಗಿದೆ. ಭಾರತಕ್ಕೆ ಬಂದ ನಂತರ ರಾಣಾನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಎನ್‌ಐಎ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಹಸ್ತಾಂತರ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಂಡಿದ್ದಾರೆ.
ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೆರಿಕ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿತ್ತು. ಮುಂಬೈ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿತ್ತು. ಭಾರತಕ್ಕೆ ಗಡೀಪಾರು ಮಾಡದಿರಲು ರಾಣಾನಿಗೆ ಇದ್ದ ಕೊನೆಯ ಕಾನೂನು ಅವಕಾಶ ಕೈತಪ್ಪಿದ್ದು, ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ
ಇದಕ್ಕೂ ಮೊದಲು, ಸ್ಯಾನ್ ಫ್ರಾನ್ಸಿಸ್ಕೋದ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಫಾರ್ ದಿ ನಾರ್ತ್ ಸರ್ಕ್ಯೂಟ್ ಸೇರಿದಂತೆ ಹಲವಾರು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದಲ್ಲಿ ತಹಾವೂರ್ ರಾಣಾಗೆ ಸೋಲು ಉಂಟಾಗಿತ್ತು. ಕಳೆದ ವರ್ಷ ನವೆಂಬರ್ 13 ರಂದು ರಾಣಾ ಯುಎಸ್ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದನು.
ತಹಾವೂರ್ ರಾಣಾ ಯಾರು?
ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸಿದ್ದ.
ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ
ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡೀಪಾರುಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಗಡೀಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.
ಮುಂಬೈ ದಾಳಿ:
2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.