– ಉಗ್ರನನ್ನು ಕರೆತರಲು ಬಹಳ ಎಚ್ಚರಿಕೆ ವಹಿಸಿದ್ದ ಭಾರತ
– ವಿಮಾನದ ಮಧ್ಯದಲ್ಲಿ ಕುಳಿತಿದ್ದ ರಾಣಾ
ನವದೆಹಲಿ: ಮುಂಬೈ ದಾಳಿಕೋರ ತಹಾವ್ವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ (Tahawwur Rana) ಕರೆತರಲಾಗಿದೆ. ಈ ಕರೆ ತರುವ ಪ್ರಕ್ರಿಯೆ ಬಹಳ ರಹಸ್ಯವಾಗಿತ್ತು. ಈ ಕರೆ ತರುವ ಕಾರ್ಯಾಚರಣೆಗೆ ಬಳಸಲಾದ ವಿಮಾನಕ್ಕೆ ಡಮ್ಮಿ ಕೋಡ್ (Dummy Code) ನೀಡಲಾಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ವಿಮಾನವು ಪಾಲಂ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಇಳಿಯುವವರೆಗೂ ವಿಧ್ವಂಸಕ ಕೃತ್ಯಗಳು ನಡೆಯವ ಸಾಧ್ಯತೆ ಇದ್ದ ಕಾರಣ ಹಸ್ತಾಂತರ ಪ್ರಕ್ರಿಯೆ ಬಹಳ ಸವಾಲಿನಿಂದ ಕೂಡಿತ್ತು. ಗೃಹ ಸಚಿವಾಲಯ, NSA ಕಚೇರಿ, ಗುಪ್ತಚರ ಇಲಾಖೆ ರಾಣಾನನ್ನು ಕರೆದುಕೊಂಡು ಬರುವ ವಿಮಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತ್ತು. ಇದನ್ನೂ ಓದಿ: 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?
ರಾಣಾನನ್ನು ಕರೆತಂದ ಗಲ್ಫ್‌ಸ್ಟ್ರೀಮ್ G550 (Gulfstream) ವಿಮಾನ ಸಾರ್ವಜನಿಕ ವಿಮಾನ ಟ್ರ್ಯಾಕರ್‌ಗಳಲ್ಲಿ ಪತ್ತೆಯಾಗುವುದನ್ನು ತಪ್ಪಿಸಲು ಮತ್ತು ಯಾವುದೇ ದಾಳಿ ಆಗದೇ ಇರಲು ಈ ಚಾರ್ಟರ್ಡ್ ವಿಮಾನಕ್ಕೆ ನಕಲಿ ಕೋಡ್ ನೀಡಲಾಗಿತ್ತು. ಹೀಗಾಗಿ ಯಾವ ವಿಮಾನದಲ್ಲಿ ರಾಣಾನನ್ನು ಕರೆತರಲಾಗುತ್ತಿದೆ? ಎಷ್ಟು ಗಂಟೆಗೆ ದೆಹಲಿಗೆ ವಿಮಾನ ಲ್ಯಾಂಡ್ ಆಗುತ್ತಿದೆ ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ.
ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಅಮೆರಿಕದ ಸುಪ್ರೀಂ ಕೋರ್ಟ್ ರಾಣಾನನ್ನು ಗಡಿಪಾರು ಮಾಡುವಾಗ ಹಲವಾರು ಷರತ್ತುಗಳನ್ನು ವಿಧಿಸಿತ್ತು. ಒಂದು ವೇಳೆ ರಾಣಾ ಕರೆತರುವಾಗ ಏನಾದರೂ ಹೆಚ್ಚು ಕಡಿಮೆಯಾದರೂ ಭಾರತದ ರಕ್ಷಣಾ ಸಂಸ್ಥೆಗಳಿಗೆ ಕಪ್ಪು ಚುಕ್ಕೆ ಬರುತ್ತಿತ್ತು. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಬೇರೆ ದೇಶದಿಂದ ಉಗ್ರರನ್ನು ಕರೆ ತರುವ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕೆ ಬಹಳ ಎಚ್ಚರಿಕೆ ವಹಿಸಿ ವಿಶೇಷ ವಿಮಾನದ ಮೂಲಕ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ.
ವಿಮಾನವು ಬುಧವಾರ ನಸುಕಿನ ಜಾವ ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟು ರೊಮೇನಿಯಾದಲ್ಲಿ ಪಿಟ್ ಸ್ಟಾಪ್ ನಂತರ ಸಂಜೆ 6 ಗಂಟೆ ಸುಮಾರಿಗೆ ದೆಹಲಿಯಲ್ಲಿ ಲ್ಯಾಂಡ್ ಆಯ್ತು. ವಿಮಾನವು ಸುಮಾರು 11 ಗಂಟೆಗಳ ಕಾಲ ರೊಮೇನಿಯನ್ ರಾಜಧಾನಿಯಲ್ಲಿ ನಿಂತಿತ್ತು. ಇದನ್ನೂ ಓದಿ: ಹೈಟೆಕ್ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?
ಭಾರತಕ್ಕೆ ಹಿಂದಿರುಗುವ ವಿಮಾನದಲ್ಲಿ, ರಾಣಾ ಮಧ್ಯದಲ್ಲಿ ಕುಳಿತಿದ್ದ ಮತ್ತು ಆತನ ಸುತ್ತಲಿನ ಎಲ್ಲಾ ಆಸನಗಳಲ್ಲಿ NSG ಕಮಾಂಡೋಗಳು ಇದ್ದರು. ನಂತರ ಹಿರಿಯ NIA ಅಧಿಕಾರಿಗಳು ಇದ್ದರು.
ವಿಮಾನದಲ್ಲಿ ಇರುತ್ತೆ ಟ್ರಾನ್ಸ್‌ಪಾಂಡರ್ ಕೋಡ್
ಆಕಾಶದಲ್ಲಿ ಹಾರಾಡುವ ಪ್ರತಿ ವಿಮಾನಕ್ಕೆ ಟ್ರಾನ್ಸ್‌ಪಾಂಡರ್ ಕೋಡ್ ಇರುತ್ತದೆ. ಟ್ರಾನ್ಸ್‌ಪಾಂಡರ್ ಕೋಡ್ ಮೂಲಕ ವಿಮಾನವನ್ನು ಗುರುತಿಸಲಾಗುತ್ತದೆ ಮತ್ತು ಟ್ರ್ಯಾಕ್ ಮಾಡಲಾಗುತ್ತದೆ. ಹಲವಾರು ಸಂಸ್ಥೆಗಳು ಈ ಕೋಡ್ ಬಳಸಿಕೊಂಡು ಆ ವಿಮಾನ ಸದ್ಯ ಯಾವ ಸ್ಥಳದಲ್ಲಿ ಹಾರಾಡುತ್ತಿದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಿರುತ್ತದೆ.
ಈ ಕೋಡ್‌ಗಳನ್ನು ವಾಯು ಸಂಚಾರ ನಿಯಂತ್ರಣದಿಂದ (ATC) ವಿಮಾನಗಳಿಗೆ ನಿಯೋಜಿಸಲಾಗುತ್ತದೆ. ಅವುಗಳನ್ನು ವಿಮಾನದ ಟ್ರಾನ್ಸ್‌ಪಾಂಡರ್‌ನೊಂದಿಗೆ ಬಳಸಲಾಗುತ್ತದೆ. ಈ ಕೋಡ್ ಮೂಲಕವೇ ನಿರ್ದಿಷ್ಟ ವಿಮಾನವನ್ನು ಗುರುತಿಸಲು, ಅದರ ಹಾರಾಟದ ಮಾರ್ಗ, ಎತ್ತರ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಟ್ರ್ಯಾಕ್ ಮಾಡಲಾಗುತ್ತದೆ.
ವಿಮಾನ ತರಬೇತಿ ಸಮಯ ಅಥವಾ ರಾಡಾರ್ ವ್ಯವಸ್ಥೆಗಳನ್ನು ಪರೀಕ್ಷಿಸಲು ಡಮ್ಮಿ ಕೋಡ್‌ಗಳನ್ನು ಬಳಸಲಾಗುತ್ತದೆ. ಆದರೆ ಅವುಗಳನ್ನು ನೈಜ ಹಾರಾಟ ಕಾರ್ಯಾಚರಣೆಗಳಿಗೆ ಬಳಸಲಾಗುವುದಿಲ್ಲ.