ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಮುಂಬೈ ಅಹಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆ ನಿಗದಿತ ಅವಧಿಯೊಳಗಡೆ ಪೂರ್ಣಗೊಳ್ಳುವುದು ಅನುಮಾನ ಎನ್ನುವ ಮಾತು ಈಗ ಕೇಳಿಬಂದಿದೆ.
ಹಣ್ಣು ಬೆಳೆಗಾರರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಬೇಕಾದ ಭೂಮಿಯನ್ನು ಡಿಸೆಂಬರ್ ಒಳಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
Advertisement
ಪ್ರಧಾನಿಗಳ ಸಚಿವಾಲಯ ಪ್ರತಿವಾರ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತಿದ್ದು, ಮಹಾರಾಷ್ಟ್ರದ ಸಪೋಟ ಹಾಗೂ ಮಾವು ಬೆಳೆಗಾರರ ಜೊತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ(ಜೈಕಾ)ಗೆ ಅಧಿಕಾರಿಗಳು ನೀಡಿದ್ದಾರೆ.
Advertisement
108 ಕಿ.ಮೀ ಹಳಿ ನಿರ್ಮಿಸಲು ಜಾಗವನ್ನು ಸ್ವಾಧೀನ ಪಡಿಸಬೇಕಿದೆ. ಪ್ರತಿಭಟನಾಕಾರರ ಜೊತೆ ಜನ ಪ್ರತಿನಿಧಿಗಳು ಕೈ ಜೋಡಿಸಿದ್ದರಿಂದ ಕೆಲವು ತಿಂಗಳಿಂದ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ.
Advertisement
ಈ ಹಣ್ಣಿನ ತೋಟವನ್ನು ಬೆಳೆಸಲು ಮೂರು ದಶಕಗಳ ಕಾಲ ಶ್ರಮಪಟ್ಟಿದ್ದೇನೆ. ಈಗ ಬಿಟ್ಟುಕೊಡುವಂತೆ ಹೇಳುತ್ತಿದ್ದಾರೆ. ನನ್ನ ಇಬ್ಬರು ನಿರುದ್ಯೋಗಿ ಮಕ್ಕಳಲ್ಲಿ ಒಬ್ಬರಿಗೆ ಉದ್ಯೋಗ ಕೊಡುವ ಭರವಸೆ ಕೊಟ್ಟಲ್ಲಿ ಬಿಟ್ಟು ಕೊಡುತ್ತೇನೆ ಎಂದು 62 ವರ್ಷದ ಸಪೋಟ ಬೆಳೆಗಾರ ದಶರತ್ ಪುರವ್ ಹೇಳಿದ್ದಾರೆ.
Advertisement
ಯೋಜನೆಯನ್ನು ಮುಂದಿನ ತಿಂಗಳು ಜೈಕಾ ಪರಿಶೀಲಿಸಲಿದ್ದು, ಈ ಅವಧಿಯ ಒಳಗಡೆ ಸ್ವಾಧೀನ ಪ್ರಕ್ರಿಯೆ ಮುಗಿದಿರಬೇಕು. ಭೂಮಿ ಸ್ವಾಧೀನವಾಗದೇ ಇದ್ದಲ್ಲಿ ಯೋಜನೆಗೆ ಬೇಕಾದ ಸಾಲ ಬಿಡುಗಡೆ ಮಾಡಲು ಜೈಕಾ ತಡ ಮಾಡುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲು ಇಚ್ಚಿಸದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮಾರ್ಗದರ್ಶಿಯ ಪ್ರಕಾರ ಪರಿಸರ ಹಾಗೂ ಸಾಮಾಜಿಕವಾಗಿ ಭಾರತ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಿ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ಜೈಕಾ ವಕ್ತಾರೆ ತಿಳಿಸಿದ್ದಾರೆ.
2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಈ ಕಾರಣಕ್ಕೆ ಜಪಾನ್ ನ ಸಾರಿಗೆ ಅಧಿಕಾರಿಗಳ ಜೊತೆ ಇದೇ ತಿಂಗಳು ಭಾರತ ಮಾತುಕತೆಯನ್ನು ನಿಗದಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಒಟ್ಟು ಮೊತ್ತ 1.14 ಲಕ್ಷ ಕೋಟಿ ರೂ. ಆಗಿದ್ದು, ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ.
ಭಾರತದಲ್ಲಿ ಯಾವುದೇ ಯೋಜನೆಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್(ಎನ್ ಹೆಚ್ ಆರ್ ಸಿ ಎಲ್) ವಕ್ತಾರ ಧನಂಜಯ್ ಕುಮಾರ್ ಹೇಳಿದ್ದಾರೆ.