ಚಿಕ್ಕಮಗಳೂರು: ರಸ್ತೆ ನಿರ್ಮಾಣ ಹೆಸರಿನಲ್ಲಿ ಮುಳ್ಳಯ್ಯನಗಿರಿಯೂ ಕಾಂಕ್ರೀಟ್ ನಾಡಾಗಿ ಸಿಮೆಂಟ್ ಧೂಳಲ್ಲಿ ಮರೆಯಾಗುವ ಕಾಲ ಬರುತ್ತಿದೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮನೆ ಮಾಡಿದೆ.
ಹಿಮಾಲಯ ಪರ್ವತಕ್ಕಿಂತ ಹಳೆಯದ್ದಾದ ದಟ್ಟ ಕಾನನದ ಶೋಲಾ ಕಾಡುಗಳ ಪಶ್ಚಿಮ ಘಟ್ಟಕ್ಕೂ ಸಂಚಕಾರ ಬಂದಿದೆ. ರಸ್ತೆ ಅಗಲೀಕರಣದ ಹೆಸರಲ್ಲಿ ಮುಳ್ಳಯ್ಯನಗಿರಿ ತುದಿಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿರುವುದು ಕಂಡರೆ ಗಿರಿ ಆಯಸ್ಸು ಮುಗಿಯಿತ್ತಾ ಎಂಬ ಅನುಮಾನ ಮೂಡಿದೆ.
ಇಂದು ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡುತ್ತಿರುವುದು ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸೋದರಲ್ಲಿ ಅನುಮಾನವಿಲ್ಲ. ಸರ್ಕಾರ ರಸ್ತೆ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದೆ ವಿನಃ ಅಲ್ಲಿನ ಪ್ರಾಣಿ-ಪಕ್ಷಿಗಳು, ನೀರಿನ ಮೂಲ, ಶೋಲಾ ಅರಣ್ಯ, ಹುಲ್ಲುಗಾವಲಿನ ಬಗ್ಗೆ ಕಾಳಜಿಯೇ ಇಲ್ಲವೆಂದು ಪರಿಸರವಾದಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲೇ ಸೂಕ್ಷ್ಮವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯೂ ಒಂದು. ಇಲ್ಲಿ ಮಣ್ಣನ್ನು ಅಗೆಯೋದು, ಗುಂಡಿ ತೋಡೋದು, ಬ್ಲಾಸ್ಟ್ ಮಾಡೋದು ಮಾಡಿದರೆ ಮಳೆಗಾಲದಲ್ಲಿ ಅದು ಕುಸಿಯುತ್ತೆ ಅದರಿಂದ ಬಹುದೊಡ್ಡ ಅನಾಹುತ ಆಗುತ್ತದೆ. ಒಮ್ಮೆ ಈ ಗಿರಿಯನ್ನು ನಾಶ ಮಾಡಿದರೆ, ಮತ್ತೆ ನಿರ್ಮಿಸೋದು ಅಸಾಧ್ಯ. ಇಂತಹ ಅಪರೂಪದ ಪ್ರಕೃತಿ ಸಂಪತ್ತನ್ನು ಉಳಿಸಿಕೊಳ್ಳುವ ಬದಲು ಸರ್ಕಾರ ಅಳಿಸೋಕೆ ಬೇಕಾದ ಎಲ್ಲಾ ಕೆಲಸ ಮಾಡುತ್ತಿದೆ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.
ಈ ಅರಣ್ಯ ನಾಶವಾದರೆ ಅಂತರ್ಜಲ ಕುಸಿಯುತ್ತೆ. ಶೋಲಾ ಅರಣ್ಯ ನಾಶವಾದರೆ ನೀರಿನ ಸೆಲೆಯೂ ಬತ್ತುತ್ತೆ. ನೀರನ್ನು ವರ್ಷವಿಡಿ ಹಿಡಿದಿಟ್ಟು ಹರಿಸೋ ಹುಲ್ಲುಗಾವಲು ನಾಶವಾಗುತ್ತೆ. ಕಾಂಕ್ರೀಟ್ ಕಾಡಾದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು. ಸರ್ಕಾರದ ಒಂದು ಕೆಲಸ ಪ್ರಕೃತಿ ಹಾಗೂ ಸಮಾಜವನ್ನೇ ನಾಶಮಾಡುವಂತದ್ದು. ಸರ್ಕಾರ ಇಲ್ಲಿಗೆ ಬರುವ ಜನರನ್ನಷ್ಟೆ ನೋಡುತ್ತಿದೆ ವಿನಃ ವರದಂತಿರೋ ಅರಣ್ಯದ ಬಗ್ಗೆ ಯೋಚಿಸುತ್ತಿಲ್ಲ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.