– ನೀತಾ ಹೆಸರಲ್ಲಿ ಯಾವುದೇ ಖಾತೆ ಇಲ್ಲ ಎಂದ ರಿಲಾಯನ್ಸ್
– ನಕಲಿ ಟ್ವೀಟ್ ಕುರಿತು ಎಚ್ಚರ ವಹಿಸುವಂತೆ ಮನವಿ
ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ಹಾಗೂ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಹೆಸರಿಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆಯಲಾಗಿದ್ದು, ಈಗ ಈ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ರಿಲಾಯನ್ಸ್ ಜಿಯೋ ಇನ್ಫೋಕಾಮ್ ವಕ್ತಾರರು ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಸ್ಪಷ್ಟನೆ ನೀಡಿದ್ದಾರೆ. ನೀತಾ ಅಂಬಾನಿ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಟ್ವಿಟ್ಟರ್ ಖಾತೆ ತೆರೆದು ವಿವಾದಾತ್ಮಕ ಸಾಕಷ್ಟು ಟ್ವೀಟ್‍ಗಳನ್ನು ಮಾಡುತ್ತಿದ್ದು, ಇದು ನಮಗೆ ತಿಳಿದಿದೆ. ಆದರೆ ನೀತಾ ಅಂಬಾನಿ ಅವರ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್ ಖಾತೆ ಇಲ್ಲ. ಅವರ ಹೆಸರು, ಭಾವಚಿತ್ರವಿರುವ ಎಲ್ಲ ಟ್ವಿಟ್ಟರ್ ಖಾತೆಗಳು ನಕಲಿಯಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ನಕಲಿ ಟ್ವಿಟ್ಟರ್ ಖಾತೆಯಿಂದ ದುರುದ್ದೇಶಪೂರಕವಾಗಿ ಟ್ವೀಟ್ ಮಾಡಲಾಗುತ್ತಿದ್ದು, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಈ ಕುರಿತು ಟ್ವಿಟ್ಟರ್ ಕಂಪನಿಯ ಗಮನಕ್ಕೂ ತರಲಾಗಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. NitaMAmbani, NitaAmbaani, Nita Ambani, ಸೇರಿದಂತೆ ವಿವಿಧ ಯೂಸರ್ ನೇಮ್ ಮೂಲಕ ಟ್ವೀಟ್ ಖಾತೆ ತೆರೆಯಲಾಗಿದೆ. ಈ ಖಾತೆಗಳಿಂದ ವಿವಾದಾತ್ಮ ಟ್ವೀಟ್ ಮಾಡಲಾಗುತ್ತಿದೆ. ಇವುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸದೆ, ನಿರ್ಲಕ್ಷಿಸಬೇಕು ಎಂದು ವಕ್ತಾರರು ತಿಳಿಸಿದ್ದಾರೆ.