ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (WestBengal) 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿನ 7ನೇ ಬೆಂಗಾಲ್ ಜಾಗತಿಕ ಉದ್ಯಮ ಸಮಾವೇಶದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ರಿಲಯನ್ಸ್ ಇದುವರೆಗೆ ಸುಮಾರು 45,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ನಾವು 20 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ಘೋಷಿಸಿದರು.
Advertisement
Advertisement
ದೂರಸಂಪರ್ಕ, ರೀಟೇಲ್ ಮತ್ತು ಜೈವಿಕ ಇಂಧನ ಕ್ಷೇತ್ರಗಳಲ್ಲಿ ಈ 20 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ನಾವು 5ಜಿ ತಂತ್ರಜ್ಞಾನವನ್ನು ರಾಜ್ಯದ ಮೂಲೆ ಮೂಲೆಗೆ ಒಯ್ಯುತ್ತಿದ್ದೇವೆ. ವಿಶೇಷವಾಗಿ ಗ್ರಾಮೀಣ ಭಾಗದ ಬಂಗಾಳವನ್ನು ಸಂಪರ್ಕಿಸಲಾಗುತ್ತಿದೆ. ನಾವು ಬಂಗಾಳದ ಬಹುತೇಕ ಭಾಗಗಳನ್ನು ಆವರಿಸಿದ್ದೇವೆ. ಜಿಯೋ ನೆಟ್‍ವರ್ಕ್ ರಾಜ್ಯದ ಜನಸಂಖ್ಯೆಯ 98.8%ರಷ್ಟು ಮತ್ತು ಕೋಲ್ಕತ್ತಾ ಟೆಲಿಕಾಂ ವಲಯದಲ್ಲಿ 100%ರಷ್ಟು ಜನಸಂಖ್ಯೆಯನ್ನು ತಲುಪಿದೆ. ಜಿಯೋದ ಪ್ರಬಲ ನೆಟ್‍ವರ್ಕ್ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಕೃಷಿಯನ್ನು ಉತ್ತೇಜಿಸುತ್ತದೆ ಎಂದರು.
Advertisement
#WATCH | At the Bengal Global Business Summit, Reliance Industries chairman Mukesh Ambani says, "Reliance Foundation has taken up an ambitious project to renovate and restore the Kalighat temple in Kolkata. We are in the process of repairing the entire temple complex including… pic.twitter.com/xXJB1Ey0Iu
— ANI (@ANI) November 21, 2023
Advertisement
ರಿಲಯನ್ಸ್ ರೀಟೇಲ್ ಮುಂದಿನ ಎರಡು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ. ಸದ್ಯಕ್ಕೆ ಬಂಗಾಳದಲ್ಲಿ ಸುಮಾರು 1000 ರಿಲಯನ್ಸ್ ಸ್ಟೋರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಅದು 1200ಕ್ಕೆ ಹೆಚ್ಚಾಗುತ್ತದೆ. ನೂರಾರು ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಮತ್ತು ಬಂಗಾಳದ ಸುಮಾರು 5.5 ಲಕ್ಷ ಕಿರಾಣಿ ಅಂಗಡಿಯವರು ನಮ್ಮ ರೀಟೇಲ್ ವ್ಯಾಪಾರದೊಂದಿಗೆ ಕೈ ಜೋಡಿಸಿದ್ದಾರೆ. ಹೊಸ ಮಳಿಗೆಗಳನ್ನು ತೆರೆಯುವುದರಿಂದ ಅವರಿಗೆ ಲಾಭವಾಗಲಿದೆ. ಪ್ರಭುಜಿ, ಮುಖ್ರೋಚಕ್, ಸಿಟಿ ಗೋಲ್ಡ್, ಬಿಸ್ಕ್ ಫಾರ್ಮ್‍ನಂತಹ ಬಂಗಾಳದ ಹಲವು ಪ್ರಾದೇಶಿಕ ಬ್ರ್ಯಾಂಡ್‍ಗಳನ್ನು ಉಲ್ಲೇಖಿಸಿದ ಅವರು, ರಿಲಯನ್ಸ್ ರೀಟೇಲ್ ಮೂಲಕ ನಾವು ಈ ಬ್ರ್ಯಾಂಡ್‍ಗಳನ್ನು ಇಡೀ ದೇಶದಾದ್ಯಂತ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು.
ಭಾರತದ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ರಿಲಯನ್ಸ್ ಮುಂದಿನ ಮೂರು ವರ್ಷಗಳಲ್ಲಿ 100 ಕಂಪ್ರೆಸ್ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲಿದೆ. ಈ ಘಟಕಗಳು 5.5 ಮಿಲಿಯನ್ ಟನ್ ಕೃಷಿ ಅವಶೇಷಗಳು ಮತ್ತು ಸಾವಯವ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತವೆ. ಇದು ಸುಮಾರು 2 ಮಿಲಿಯನ್ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ವಾರ್ಷಿಕವಾಗಿ 2.5 ಮಿಲಿಯನ್ ಟನ್ ಸಾವಯವ ಗೊಬ್ಬರವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಇಂಧನ ಪಾರ್ಕ್ ಗಳನ್ನು ಸ್ಥಾಪಿಸಲು ನಾವು ಸಹಾಯ ಮಾಡುತ್ತೇವೆ. ಇದರೊಂದಿಗೆ, ಅವರು ಆಹಾರ ಪೂರೈಕೆದಾರರೊಂದಿಗೆ ಇಂಧನ ಪೂರೈಕೆದಾರರಾಗಲು ಸಾಧ್ಯವಾಗುತ್ತದೆ ಮತ್ತು ಅವರ ಆದಾಯವೂ ಹೆಚ್ಚಾಗುತ್ತದೆ ಎಂದು ಅಂಬಾನಿ (Mukesh Ambani) ತಿಳಿಸಿದರು. ಇದನ್ನೂ ಓದಿ: ಕಡಿಮೆ ಬೆಲೆಗೆ ಕ್ಲೌಡ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಮುಂದಾದ ಜಿಯೋ
Speech by Shri Mukesh D Ambani, Chairman & Managing Director, Reliance Industries Limited at the 7th Edition of Bengal Global Business Summit, Kolkata – 21st November 2023 pic.twitter.com/4v6GtSmNSR
— Reliance Industries Limited (@RIL_Updates) November 21, 2023
ಫೌಂಡೇಶನ್ ನಡೆಸುವ ಕೆಲಸಗಳು: ಕೋಲ್ಕತ್ತಾದ ಪ್ರಸಿದ್ಧ ಕಾಳಿಘಾಟ್ ದೇವಾಲಯದ ನವೀಕರಣ ಮತ್ತು ಜೀರ್ಣೋದ್ಧಾರ ಹಾಗೂ ಶತಮಾನಗಳಷ್ಟು ಹಳೆಯದಾದ ಈ ದೇವಾಲಯದ ದುರಸ್ತಿ ಮತ್ತು ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ರಿಲಯನ್ಸ್ ಫೌಂಡೇಷನ್ ಮಾಡುತ್ತಿದೆ. ಫೌಂಡೇಷನ್‍ನ ‘ಸ್ವದೇಶ್’ ಉಪಕ್ರಮದ ಅಡಿಯಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲಗಳನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ಪ್ರಚಾರ ಮಾಡಲಾಗುತ್ತಿದೆ. ರಿಲಯನ್ಸ್ ಫೌಂಡೇಷನ್ ಬಂಗಾಳದ ಯುವ ಪೀಳಿಗೆಯ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುತ್ತದೆ. ಅಲ್ಲದೆ ನೇಕಾರರು, ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳ ಉತ್ಪನ್ನಗಳನ್ನು ರಿಲಯನ್ಸ್ ನ ರೀಟೇಲ್ ನ ಔಟ್‍ಲೆಟ್‍ಗಳ ಮೂಲಕ ಮಾರಾಟ ಮಾಡಲು ‘ಬಿಸ್ವಾ ಬಾಂಗ್ಲಾ ಕಾರ್ಪೊರೇಷನ್’ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.