ಹರಿ ಸಂತೋಷ್ ಸಾರಥ್ಯದ ಎರಡು ಚಿತ್ರಗಳಿಗೆ ಮುಹೂರ್ತ

Public TV
3 Min Read
Vicky Varun 5

“ಅಲೆಮಾರಿ” ಚಿತ್ರದೊಂದಿಗೆ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಿಸಿ, ಇಲ್ಲಿಯವರೆಗೂ ಹತ್ತು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್ (Hari Santhosh), ಸಾರಥ್ಯದ ಎರಡು ಚಿತ್ರಗಳ ಆರಂಭೋತ್ಸವ ಕಾರ್ತಿಕ ಸೋಮವಾರದ ಶುಭದಿನದಂದು ನೆರವೇರಿತು. ಕೆ.ವಿ.ಎನ್ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಹಾಗೂ ರವಿಕುಮಾರ್ ಪೋಸ್ಟರ್ ಅನಾವರಣ ‌ಮಾಡುವ ಮೂಲಕ ನೂತನ ಚಿತ್ರಗಳಿಗೆ ಚಾಲನೆ ನೀಡಿದರು. ಡಿ.ಎಸ್ ಮ್ಯಾಕ್ಸ್ ನ ದಯಾನಂದ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಎರಡು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Vicky Varun 4

ಮೊದಲು “ಡಿಸ್ಕೋ” (Disco) ತಂಡದ ಸದಸ್ಯರು ಮಾತನಾಡಿದರು . “ಡಿಸ್ಕೋ” ಇದು ನಾಯಕನ ಅಡ್ಡ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ಹರಿ ಸಂತೋಷ್, ವಿಕ್ಕಿ ವರುಣ್ ಈ ಚಿತ್ರದ ನಾಯಕ. ನನ್ನ ಹಾಗೂ ವಿಕ್ಕಿ ವರಣ್ (Vicky Varun) ಕಾಂಬಿನೇಶನ್ ನಲ್ಲಿ “ಕಾಲೇಜ್ ಕುಮಾರ” ಚಿತ್ರದ ನಂತರ ಈ ಚಿತ್ರ ಮೂಡಿಬರುತ್ತಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಬ್ಯನಾರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಪ್ರಶಾಂತ್ ಕಲ್ಲೂರ್ ಹಾಗೂ ಹರೀಶ್ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಧ್ರುವ್ ಸಂಗೀತ ನೀಡಲಿದ್ದಾರೆ‌. ಇಂದು ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಿದರು.

Vicky Varun 3

ಇದು ನಾನು ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ. ಹಿಂದಿನ ಮೂರು ಚಿತ್ರಗಳೆ ಬೇರೆ ತರಹ.‌ ಇದೇ ಬೇರೆ ತರಹ. ನಾನು ಹೇಗೆ ಇದ್ದಿನೊ ಅದೇ ತರಹ ಪಾತ್ರ ಎನ್ನಬಹುದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಇದು ಹಳ್ಳಿಯಿಂದ ಸಿಟಿಗೆ ಬಂದ ಹುಡುಗನ ಕಥೆ ಅಲ್ಲ. ಹಳ್ಳಿಯನ್ನೇ ಸಿಟಿ‌ ಮಾಡಲು ಹೊರಟ ಹುಡುಗನ ಕಥೆ. ಹರಿ ಸಂತೋಷ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ ಎಂದರು ನಾಯಕ ವಿಕ್ಕಿ ವರುಣ್. ಸಹ ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್, ಹರೀಶ್ ಹಾಗೂ ಸಂಗೀತ ನಿರ್ದೇಶಕ ಧ್ರುವ್ “ಡಿಸ್ಕೊ” ಚಿತ್ರದ ಬಗ್ಗೆ ಮಾತನಾಡಿದರು.

Vicky Varun 2

ಆನಂತರ “congratulations ಬ್ರದರ್” ಚಿತ್ರತಂಡದವರು ಮಾಧ್ಯಮದ ಮುಂದೆ ಮಾತನಾಡಿದರು. ಎರಡು ವರ್ಷಗಳಿಂದ ನಾವು ಹನ್ನೆರಡು ಜನ ಸ್ನೇಹಿತರು ಸೇರಿ “ಪೆನ್ ಎನ್ ಪೇಪರ್” ಸಂಸ್ಥೆ ಆರಂಭಿಸಿದ್ದೆವು. ಈ ಮೂಲಕ  ಹಲವು ವೆಬ್ ಸಿರೀಸ್ ಗಳಿಗೆ ಹಾಗೂ ಕೆಲವು ಪ್ರೊಡಕ್ಷನ್ ಹೌಸ್ ಗಳಿಗೆ ಕಥೆ ಒದಗಿಸಿಕೊಟ್ಟಿದ್ದೇವೆ. ಈಗ ಇದೇ ತಂಡದಿಂದ ಮೊದಲ ಸಿನಿಮಾ ಮಾಡುತ್ತಿದ್ದೇವೆ. ಅದೇ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ “congratulations ಬ್ರದರ್”. ಈ ಚಿತ್ರದ ಕಥೆ ಬರೆಯಲು ಒಂದು ವರ್ಷವಾಯಿತು. ಮಾರ್ನಿಂಗ್ ಶೋ ಆಡಿಯನ್ಸ್ ನ ತಲೆಯಲ್ಲಿಟ್ಟಿಕೊಂಡು ಕಥೆ ಮಾಡಿದ್ದೇವೆ. ನನ್ನ ತಂಡದಲ್ಲಿರುವ  ಪ್ರತಾಪ್ ಗಂಧರ್ವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ಪ್ರಶಾಂತ್ ಕಲ್ಲೂರ್ , ಹರೀಶ್ ಹಾಗೂ ರವಿಕುಮಾರ್ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ‌. ಸಂಜನಾ ಈ ಚಿತ್ರದ ನಾಯಕಿ. ಅನುಷಾ ಎಂಬ ಹೊಸ ಹುಡುಗಿಯನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ರೊಮ್ಯಾಂಟಿಕ್ ಜಾನರ್ ನ ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಪ್ರತಾಪ್, ರಕ್ಷಿತ್ ಮುಂತಾದವರು ಚಿತ್ರಕಥೆ ರಚಿಸಿದ್ದಾರೆ ಎಂದು ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ತಿಳಿಸಿದರು.

Vicky Varun 1

ಹಲವು ಧಾರಾವಾಹಿಗಳಿಗೆ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಚಿತ್ರ. ನಮ್ಮ ತಂಡದ ಅನೇಕರಿಗೆ ಇದು ಹೊಸ ಹೆಜ್ಜೆ. ಸಾಮಾನ್ಯವಾಗಿ ಹೊಸ ಹೆಜ್ಜೆ ಅಷ್ಟು ಸುಲಭವಾಗಿರುವುದಿಲ್ಲ.‌ ಅದನ್ನು‌ ನಮಗೆ ಹರಿ ಸಂತೋಷ್ ಸುಲಭ ಮಾಡಿಕೊಟ್ಟಿದ್ದಾರೆ. ಹರಿ ಸಂತೋಷ್ ಅವರು ಹೇಳಿದ ಹಾಗೆ ಈ ಚಿತ್ರದ ಕಥೆ, ಚಿತ್ರಕಥೆ ರಚನೆಗೆ ವರ್ಷದ ಸಮಯ ಹಿಡಿಸಿದೆ. ನಮ್ಮ ಕಥೆ ಪೇಪರ್ ನಲ್ಲಿ ಈಗಾಗಲೇ ಗದ್ದಿದೆ. ಪ್ರೇಕ್ಷಕರು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ನಾಳೆಯಿಂದಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರತಾಪ್ ಗಂಧರ್ವ ತಿಳಿಸಿದರು.

ಕಿರುತೆರೆ ಹಾಗೂ ನಾಟಕಗಳಲ್ಲಿ ನಟಿಸಿರುವ ನನಗೆ ಹಿರಿತೆರೆಯಲ್ಲಿ ನಾಯಕನಾಗಿ ಮೊದಲ ಚಿತ್ರ ಎಂದರು ನಾಯಕ ರಕ್ಷಿತ್ ನಾಗ್. ನಾಯಕಿ ಸಂಜನಾ, ನಟಿ ಅನೂಷ, ಸಂಗೀತ ನಿರ್ದೇಶಕ ಸೂರಜ್ ಜೋಯಿಸ್, ಛಾಯಾಗ್ರಾಹಕ ಗುರು, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್, ಹರೀಶ್ ಹಾಗೂ ರವಿಕುಮಾರ್ ಚಿತ್ರಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ‌ ಮಾಡಿದರು.

Share This Article