ಅಣ್ಣಯ್ಯ ಅವರು ನಿರ್ಮಾಣ ಮಾಡುತ್ತಿರುವ, ಮಾಚಯ್ಯ ಭವನ್ ಅವರ ನಿರ್ದೇಶನದ, ಅಕಾಲ ಚಲನಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ನಾಗೇಂದ್ರ ಅರಸ್, ಲಕ್ಕಿರಾಮ್, ಪ್ರಿಯಾಂಕಾ, ವರ್ದನ್, ಬಲ ರಾಜವಾಡಿ, ಮೋಹನ್ ರಾಜ್ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕರಾಗಿ ಪ್ರದೀಪ್, ಸಂಗೀತ ನಿರ್ದೇಶಕರಾಗಿ ಸನತ್ ದೇವಾಡಿಗ, ಸಂಕಲನಕಾರರಾಗಿ ನಾಗೇಂದ್ರ ಅರಸ್ ಅವರೆ ಕೆಲಸ ಮಾಡುತ್ತಿದ್ದಾರೆ.
ಮುಹೂರ್ತದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಾಚಯ್ಯ ಭವನ್ ಈ ಮೊದಲು ದಾಳಿ ಎಂಬ ಸಿನಿಮಾ ಆರಂಭಿಸಿದ್ದೆ. ಇದು ಎರಡನೇ ಚಿತ್ರ. ಅಕಾಲ ಎಂದರೆ ಕೆಟ್ಟಘಳಿಗೆ, ಅದೇ ಹೆಸರನ್ನಿಟ್ಟುಕೊಂಡ ವ್ಯಕ್ತಿಯೊಬ್ಬ ಏನೇನೆಲ್ಲ ಮಾಡುತ್ತಾನೆ ಎಂದು ಹೇಳಲಿದ್ದೇನೆ. ಅಕಾಲ ಪಾತ್ರದಲ್ಲಿ ನಾಗೇಂದ್ರ ಅರಸ್ ಕಾಣಿಸಿಕೊಳ್ಳಲಿದ್ದಾರೆ. 2016ರಿಂದ 19ರವರೆಗೆ ಟ್ರಾವೆಲಿಂಗ್ ನಲ್ಲಿ ನಡೆವ ಕಥೆ. ಮೈಸೂರಿನಿಂದ ಗದಗವರೆಗೆ ಸುಮಾರು 60 ದಿನಗಳ ಕಾಲ 4 ಹಂತಗಳಲ್ಲಿ ಶೂಟಿಂಗ್ ನಡೆಸುವ ಪ್ಲಾನಿದೆ. ನನ್ನ ವಿಜನ್ ನಂಬಿ ನಿರ್ಮಾಪಕರು ದುಡ್ಡು ಹಾಕುತ್ತಿದ್ದಾರೆ. ಕಂಟೆಂಟ್ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಅಣ್ಣಯ್ಯ ಮಾತನಾಡುತ್ತ ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿ. ಈ ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಾವೇ ಏಕೆ ನಿರ್ಮಾಣ ಮಾಡಬಾರದು ಅಂತ ಯೋಚಿಸಿ ಬಂಡವಾಳ ಹಾಕಲು ಒಪ್ಪಿದೆ. ಬಜೆಟ್ ಬಗ್ಗೆ ಇನ್ನೂ ಯೋಚಿಸಿಲ್ಲ. ನಾರ್ಮಲ್ ಬಜೆಟ್ನಲ್ಲಿ ಮಾಡೋ ಪ್ಲಾನಿದೆ ಎಂದರು.
ನಂತರ ಚಿತ್ರದ ಪ್ರಮುಖ ಪಾತ್ರಧಾರಿಯಾದ ನಾಗೇಂದ್ರ ಅರಸ್ ಮಾತನಾಡುತ್ತ ನಿರ್ದೇಶಕರು ಒಂದು ಕಾಮಿಡಿ ಸಬ್ಜೆಕ್ಟ್ ಮಾಡಲು ನನ್ನ ಬಳಿ ಬಂದಿದ್ದರು. ಅದು ಹೋಗಿ ಈ ಸಿನಿಮಾಗೆ ನಾಂದಿಯಾಯಿತು. ಅವರು ಕಥೆ ಹೇಳುವ ವೈಖರಿಯೇ ವಿಭಿನ್ನವಾಗಿದೆ. ಎಡಿಟಿಂಗ್ ಕೂಡ ನಾನೇ ಮಾಡುತ್ತಿದ್ದೇನೆ ಎಂದರು. ನಾಯಕ ಲಕ್ಕಿರಾಮ್, ನಾಯಕಿ ಪ್ರಿಯಾಂಕ, ಛಾಯಾಗ್ರಾಹಕ ಪ್ರದೀಪ್ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು.