– ಬಾಂಗ್ಲಾದಿಂದ ಗಡಿ ನುಸುಳುವವರ ಮೇಲೆ ಗುಂಡಿನ ದಾಳಿಯ ಎಚ್ಚರಿಕೆ ನೀಡಿದ ಸೇನೆ
– ಬಾಂಗ್ಲಾ ಸರ್ಕಾರದ ನೂತನ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ವಿಶ್
ಡಾಕಾ: ಬಾಂಗ್ಲಾದೇಶದಲ್ಲಿ (Bangladesh) ನೊಬೆಲ್ ಪುರಸ್ಕೃತ ಮಹಮ್ಮದ್ ಯೂನುಸ್ (84) (Muhammad Yunus) ಸಾರಥ್ಯದಲ್ಲಿ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಢಾಕಾದಲ್ಲಿ ಬಾಂಗ್ಲಾದ ಮುಖ್ಯಸ್ಥರಾಗಿ ಪ್ರೊ.ಮೊಹಮ್ಮದ್ ಯೂನಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ 15 ಸದಸ್ಯರ ಸಲಹಾ ಮಂಡಳಿಯೂ ಅಸ್ತಿತ್ವಕ್ಕೆ ಬಂದಿದೆ.
ಈ ಕ್ಷಣಕ್ಕೆ ಬಿಎನ್‍ಪಿ ನಾಯಕಿ ಖಲಿದಾ ಜಿಯಾ, ಜಮಾತ್ ಎ ಇಸ್ಲಾಮಿ ನಾಯಕರು ಸಾಕ್ಷಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಸೇನಾ ಮುಖ್ಯಸ್ಥರ ನಿಗಾದಲ್ಲಿಯೇ ನಡೆದಿದೆ ಎನ್ನುವುದು ಗಮನಾರ್ಹ. ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಮುಂದಿನ ನಡೆ ಏನೆಂಬುದು ಇನ್ನೂ ಖಚಿತವಾಗಿಲ್ಲ. ಅವರು ಯುರೋಪ್‍ನಲ್ಲಿಯೂ ಆಶ್ರಯ ಕೋರಿದ್ದಾರೆ ಎನ್ನಲಾಗಿದೆ. ಅಂದ ಹಾಗೆ, ಮಹಮ್ಮದ್ ಯೂನಸ್ ಯಾರು ಎನ್ನುವುದನ್ನು ನೋಡೋಣ.
* ಸಾಮಾಜಿಕ ಹೋರಾಟಗಾರ, ಅರ್ಥಶಾಸ್ತ್ರಜ್ಞ
* 1983ರಲ್ಲಿ ಕಿರುಸಾಲ ನೀಡಲು ಗ್ರಾಮೀಣ ಬ್ಯಾಂಕ್ ಆರಂಭಿಸಿದ್ದರು.
* ಬಡವರ ಬ್ಯಾಂಕರ್ ಎಂದು ಫೇಮಸ್. ನೊಬೆಲ್ ಪ್ರಶಸ್ತಿ ಪುರಸ್ಕೃತ (2006)
* ಶೇಖ್ ಹಸೀನಾ ಸರ್ಕಾರದ ನೀತಿಗಳ ಕಟು ಟೀಕಾಕಾರ
* ಕಾರ್ಮಿಕ ಕಾಯ್ದೆ ಉಲ್ಲಂಘನೆ ಆರೋಪ. 6 ತಿಂಗಳು ಜೈಲು ಶಿಕ್ಷೆ
* ಪ್ಯಾರಿಸ್‍ನಲ್ಲಿ ವಾಸ್ತವ್ಯ. ಇಂದು ಬಾಂಗ್ಲಾಗೆ ವಾಪಾಸ್, ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆ
ಗಡಿ ನುಸುಳಿದರೆ ಗುಂಡೇಟು – ಸೇನೆ ಎಚ್ಚರಿಕೆ
ಇದರ ನಡುವೆ ಢಾಕಾ ಸೇರಿ ದೇಶದ ವಿವಿಧೆಡೆ ಹಾಡಹಗಲೇ ರಾಬರಿಗಳು ನಡೆಯತೊಡಗಿವೆ. ಹಿಂದೂಗಳ ಮೇಲೆ ದಾಳಿಗಳು ಮುಂದುವರೆದಿವೆ. ಹೀಗಾಗಿ ಸಾವಿರಾರು ನಾಗರಿಕರು ಆತಂಕದಲ್ಲಿದ್ದು, ದೇಶ ತೊರೆಯಲು ನೋಡುತ್ತಿದ್ದಾರೆ. ಈಗಾಗಲೇ ಹಿಂದೂಗಳೂ ಸೇರಿ ಸಾವಿರಾರು ಮಂದಿ ಭಾರತದ ಗಡಿಗೆ ಆಗಮಿಸಿದ್ದಾರೆ.
ಹಲವಾರು ಭಾರತದ ಒಳಬರಲು ನೋಡಿದ್ದಾರೆ. ಆದರೆ ಭದ್ರತಾ ಪಡೆಗಳು ಇದಕ್ಕೆ ಅವಕಾಶ ನೀಡಿಲ್ಲ. ಬಲವಂತವಾಗಿ ಒಳನುಗ್ಗಲು ಯತ್ನಿಸಿದರೆ ಗುಂಡು ಹಾರಿಸಬೇಕಾಗುತ್ತದೆ ಎಂದು ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಾಂಗ್ಲಾದಲ್ಲಿನ ಎಲ್ಲಾ ಭಾರತೀಯ ವೀಸಾ ಕೇಂದ್ರಗಳನ್ನು ಅನಿರ್ದಿಷ್ಟಾವಧಿಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಬಂದ್ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾದ 480 ಕಿಲೋಮೀಟರ್ ಕಡಲ ತೀರದಲ್ಲಿ ಭದ್ರತಾ ಪಡೆಗಳು ನಿಗಾವಹಿಸಿವೆ.