Connect with us

Districts

ಎಚ್‍ಡಿಡಿಗಾಗಿ ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ

Published

on

ಬೆಂಗಳೂರು: ಒಲ್ಲದ ಮನಸ್ಸಿನಿಂದ ಕೊನೆಗೂ ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿಗಳಾದ ಮುದ್ದಹನುಮೇಗೌಡ ಮತ್ತು ಕೆ.ಎನ್.ರಾಜಣ್ಣ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.

ತಮ್ಮ ನಾಮಪತ್ರವನ್ನು ರಾಜಣ್ಣ ಅವರೇ ವಾಪಸ್ ಪಡೆದುಕೊಂಡರೆ ಮುದ್ದಹನುಮೇಗೌಡ ಪರವಾಗಿ ಏಜೆಂಟ್ ರಾಯಸಂದ್ರ ರವಿಕುಮಾರ್ ಆಗಮಿಸಿ ನಾಮಪತ್ರವನ್ನು ವಾಪಸ್ ಪಡೆದುಕೊಂಡರು.

ಇಬ್ಬರು ನಾಮಪತ್ರವನ್ನು ಹಿಂಪಡೆದ ಪರಿಣಾಮ ತುಮಕೂರಿನಲ್ಲಿ ಬಂಡಾಯ ಶಮನವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಹಾದಿ ಸುಗಮಕ್ಕೆ ರಾಜ್ಯ ನಾಯಕರು ನಡೆಸಿದ ತಂತ್ರ ಯಶಸ್ವಿಯಾಗಿದೆ.

ನಾಮಪತ್ರ ವಾಪಸ್ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ನಾನು ನಾಮಪತ್ರ ಹಿಂಪಡೆದಿದ್ದೇನೆ. ನನಗೆ ಯಾವುದೇ ಬೇಡಿಕೆಗಳಿಲ್ಲ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕೆಲಸ ಮಾಡುತ್ತೇನೆ. ಮುದ್ದಹನುಮೇಗೌಡರಿಗೆ ನನ್ನ ಬೆಂಬಲವಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ಹೈಕಮಾಂಡ್ ಆದೇಶದಂತೆ ಇಡೀ ಜಿಲ್ಲೆಯಲ್ಲಿ ದೇವೇಗೌಡರ ಪರವಾಗಿ ಕೆಲಸ ಮಾಡುತ್ತೇವೆ. ತುಮಕೂರು ಜಿಲ್ಲೆಯನ್ನು ‘ದೇವೇಗೌಡರಮಯ’ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ತಮ್ಮ ಅಸಮಾಧನವನ್ನು ಬಹಿರಂಗಪಡಿಸಿದರು.

ಜಿಲ್ಲಾ ಕಾಂಗ್ರೆಸ್ ನಲ್ಲಿ ಎರಡು ಬಣ ಇದೆ. ಒಂದು ಬಣ ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದೆ. ಇನ್ನೊಂದು ಬಣ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ನಾನು ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿ ಪ್ರಧಾನಿ ಮಾಡುವ ಬಣವಾಗಿದ್ದೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯರ ಅವರು ಬಡವರ ಪರ ಕೆಲಸ ಮಾಡುತ್ತಾರೆ. ಜಿ.ಪರಮೇಶ್ವರ್ ಬಡವರ ಪರ ಕೆಲಸ ಮಾಡಲ್ಲ. ರಾಜ್ಯದಲ್ಲಿ ಯಾರು ರೈತರ ಪರ ಕೆಲಸ ಮಾಡುತ್ತಾರೋ ಅವರೇ ನಮ್ಮ ನಾಯಕರು. ಡಿಸಿಎಂ ಆಗಿ ಆರು ತಿಂಗಳಾದರೂ ಬಡವರ ಪರ ಏನ್ ಮಾಡಿದ್ದಾರೆ ಎಂದು ರಾಜಣ್ಣ ಪ್ರಶ್ನೆ ಮಾಡುವ ಮೂಲಕ ಡಿಸಿಎಂ ಪರಂ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಹೈಕಮಾಂಡ್ ನಿರ್ದೇಶನದಂತೆ ನಾಮಪತ್ರ ವಾಪಸ್ ಪಡೆಯಲಾಗಿದೆ. ಪಕ್ಷದ ಉಳಿವಿಗಾಗಿ, ಪಕ್ಷವನ್ನ ನಂಬಿ ನಾಮಪತ್ರ ವಾಪಸ್ಸು ಹಿಂಪಡೆದಿದ್ದಾರೆ. ಮುದ್ದಹನುಮೇಗೌಡರನ್ನ ಚುನಾವಣೆಯಲ್ಲಿ ಮುಂಚೂಣಿಯಲ್ಲಿಟ್ಟುಕೊಂಡು ಸ್ಥಾನಮಾನ ನೀಡಬೇಕು. ಹಾಗಾದರೆ ಮಾತ್ರ ಕಾರ್ಯಕರ್ತರು ಮತ್ತು ನಾಯಕರು ಶ್ರಮಿಸುತ್ತಾರೆ. ಇಲ್ಲವಾದರೆ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆ ಎಂದು ಮುದ್ದಹನುಮೇಗೌಡ ಬೆಂಬಲಿಗ ರಾಯಸಂಧ್ರ ರವಿ ಎಚ್ಚರಿಕೆ ಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *