ಬೆಂಗಳೂರು: ನಮ್ಮ 3 ಎಕ್ರೆ 16 ಗುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ (Encroachment) ಮಾಡಲಾಗಿದೆ. ಈ ಅಕ್ರಮ ಒತ್ತುವರಿಗೆ ನನಗೆ 62 ಕೋಟಿ ರೂ. ಕೊಡಬೇಕು ಎಂದು ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ 3 ಎಕ್ರೆ 16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಈ ಒತ್ತುವರಿ ನಡೆದಿದೆ. ನಾವು ಒತ್ತುವರಿ ಮಾಡಿದ್ದು ತಪ್ಪು ಎಂದು ಮುಡಾದವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಮುಡಾದವರು ತಪ್ಪು ಮಾಡಿದ್ದಕ್ಕೆ ನಾನು ಯಾಕೆ ಹೊಣೆಗಾರನಾಗಬೇಕು. ನಮಗೆ ಇಲ್ಲೇ ಜಾಗ ನೀಡಬೇಕು ಎಂದು ಕೇಳಿಲ್ಲ. ನಾವೇನೂ ವಿಜಯನಗರದ 3-4 ಹಂತದಲ್ಲಿ ಕೊಡಿ ಎಂದು ಕೇಳಿದ್ದೀವಾ? ನಮಗೆ ಜಾಗ ಹಂಚಿಕೆಯಾಗಿದ್ದು 2021ರಲ್ಲಿ. 2021ರಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಅವರ ಸರ್ಕಾರ ಇರುವಾಗ ಹಂಚಿಕೆಯಾಗಿ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜಸ್ಥಾನದ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್ ಮೀನಾ ರಾಜೀನಾಮೆ
ಮುಡಾದವರು ನಮ್ಮ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡು ಈಗ ಸೈಟ್, ಪಾರ್ಕ್ ಮಾಡಿದ್ದಾರೆ. ನಾನು ಸಿಎಂ ಅಂತ ಜಮೀನನ್ನು ಬಿಡಲು ಆಗುತ್ತಾ? ಅಕ್ರಮ ಒತ್ತುವರಿ ಮಾಡಿದ್ದಕ್ಕೆ ಕಾನೂನು ಪ್ರಕಾರ 62 ಕೋಟಿ ರೂ. ಕೊಡಬೇಕು ಎಂದರು.
ಒಂದು ಎಕರೆಗಿಂತ ಕಡಿಮೆ ಜಾಗ ಕೊಟ್ಟಿದ್ದಾರೆ, ಈಗ ಕೊಟ್ಟ ಸೈಟ್ ದರ ಎಷ್ಟಿದೆ ಎಂದು ನನಗೆ ಗೊತ್ತಿಲ್ಲ ಬಿಜೆಪಿ (BJP) ಅವರಿಗೆ ಏನು ವಿಷಯ ಇಲ್ಲ. ಆರ್‌ಎಸ್‌ಎಸ್ (RSS) ಹೇಳಿದಂತೆ ಚಳವಳಿ ಮಾಡುತ್ತಾರೆ. ಪ್ರತಿಭಟನೆ ಮಾಡಲು ಮುಡಾದಲ್ಲಿ ವಿಷಯ ಏನಿದೆ ಎಂದು ಸಿಎಂ ಪ್ರಶ್ನಿಸಿದರು.