– ಜಮೀನು ದಾಖಲೆ ಬಿಡುಗಡೆ ಮಾಡಿದ ಸಿಎಂ
ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ (Congress-BJP) ನಡುವೆ ಜಟಾಪಟಿ ಜೋರಾಗಿದೆ. ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿರುವ ಸಿಎಂ ಸಿದ್ದರಾಮಯ್ಯ (Siddaramaiah) , ಜಮೀನು ದಾಖಲೆ ಬಿಡುಗಡೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಅವಧಿಯಲ್ಲಿ ಬದಲಿ ನಿವೇಶನ ನೀಡಲಾಗಿತ್ತು ಎಂದು ಮುಡಾ (MUDA Scam) ಸೈಟ್ ಹಂಚಿಕೆ ದಾಖಲೆಯನ್ನು ಕಾಂಗ್ರೆಸ್ ನಾಯಕರು ಇದೇ ವೇಳೆ ಬಿಡುಗಡೆ ಮಾಡಿದರು.
ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾ ಅವ್ಯವಹಾರ ನಡೆದಿದೆ ಅಂತಾ ಉಭಯ ಸದನದಲ್ಲಿ ನಿಲುವಳಿ ಸೂಚನೆ ಕೊಟ್ಟಿದ್ದರು. ವಿಧಾನಸಭೆಯಲ್ಲಿ ಸ್ಪೀಕರ್, ಪರಿಷತ್‌ನಲ್ಲಿ ಸಭಾಪತಿಗಳು ವಿಪಕ್ಷಗಳ ನಿಲುವಳಿ ಸೂಚನೆ ತಿರಸ್ಕಾರ ಮಾಡಿದ್ದರು. ಸದನದ ನಿಯಮಾವಳಿ ಪ್ರಕಾರ ಚರ್ಚೆ ಮಾಡೋದಕ್ಕೆ ಬರೊಲ್ಲ. ಚರ್ಚೆ ಮಾಡಿದ್ರೆ ಕೆಟ್ಟ ಸಂಪ್ರದಾಯ, ನಿಯಮಾವಳಿಗೆ ವಿರುದ್ಧ ಆಗುತ್ತೆ ಅಂತಾ ಹೇಳಿ ತಿರಸ್ಕಾರ ಮಾಡಿದ್ರು. ಚರ್ಚೆಗೆ ಸ್ಪೀಕರ್, ಸಭಾಪತಿಗಳು ಅವಕಾಶ ಇಲ್ಲ ಅಂತಾ ಎರಡು ಸದನದಲ್ಲಿ ರೂಲಿಂಗ್ ಕೊಟ್ಟಿದ್ದಾರೆ. ನಿಲುವಳಿ ಸೂಚನೆಯನ್ನ ತಿರಸ್ಕಾರ ಮಾಡಿದ್ದಾರೆ. ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ದುರುದ್ದೇಶದಿಂದ ಆಧಾರ ರಹಿತವಾಗಿ, ಕಾನೂನುಬಾಹಿರವಾಗಿರೋ ರೀತಿಯಲ್ಲಿ ಚರ್ಚೆ ನಿಲುವಳಿ ಸೂಚನೆ ತಂದಿದ್ದರು. ಬಿಜೆಪಿ-ಜೆಡಿಎಸ್ ಅವರು ರಾಜಕೀಯ ದುರುದ್ದೇಶದಿಂದ ತಂದಿರೋದು. ರಾಜಕೀಯ ಮಾಡೋಕೆ ತಂದಿದ್ದರು. ಯಾವುದೇ ನಿಲುವಳಿ ಸೂಚನೆ ಚರ್ಚೆ ಆಗಬೇಕಾದ್ರೆ ನಿಯಮದ ಪ್ರಕಾರ ಇರಬೇಕು. ನಿಯಮದ ವಿರುದ್ಧ ಇದ್ದರೆ ಚರ್ಚೆ ಮಾಡೋಕೆ ಬರೊಲ್ಲ ಎಂದು ತಿಳಿಸಿದರು.
ವಿಪಕ್ಷಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಸಹಿಸೋಕೆ ಆಗ್ತಿಲ್ಲ. ನಾನು ಎರಡನೇ ಬಾರಿ ಸಿಎಂ ಆಗಿರೋದು ಸಹಿಸೋಕೆ ಆಗ್ತಿಲ್ಲ. ನಾವು ಎರಡು ವಾರ ಅಧಿವೇಶನ ಕರೆದಿದ್ದೆವು. ಎರಡು ವಾರ ಒಂದೇ ವಿಷಯ ಚರ್ಚೆ ಆಯ್ತು. ವಾಲ್ಮೀಕಿ ನಿಗಮದಲ್ಲಿ ನಡೆದಿರೋ ಹಗರಣ ಕುರಿತು ಚರ್ಚೆ ಆಯ್ತು. ಅದು ಬಿಟ್ಟರೆ ರಾಜ್ಯದ ಸಮಸ್ಯೆ ಬಗ್ಗೆ ಚಕಾರ ಎತ್ತಲಿಲ್ಲ. ಪ್ರವಾಹ ಬಂದಿರುವ ಬಗ್ಗೆ ರಾಜ್ಯದಲ್ಲಿ ನಮ್ಮ ಶಾಸಕರು ಪ್ರಸ್ತಾಪ ಮಾಡಿದ್ರು. ವಿಪಕ್ಷಗಳು ಪ್ರಸ್ತಾಪ ಮಾಡಲಿಲ್ಲ. ಬೇರೆ ವಿಚಾರಗಳ ಬಗ್ಗೆ ವಿಪಕ್ಷಗಳು ಚರ್ಚೆ ಮಾಡಿಲ್ಲ. ಇದೆಲ್ಲ ನೋಡಿದ್ರೆ ಸಿಎಂ, ರಾಜ್ಯ ಸರ್ಕಾರಕ್ಕೆ, ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು, ಕಪ್ಪು ಚುಕ್ಕೆ ತರೋಕೆ ಪ್ರಯತ್ನ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು.
ಮುಡಾ ಕೇಸ್ ಬಗ್ಗೆ ಮಾತನಾಡಿ, ಇದು ಪಿತ್ರಾರ್ಜಿತ ಆಸ್ತಿ. ಜಮೀನು ಮಾಲೀಕ ನಿಂಗಾ ಬಿನ್ ಜವರಾ 2-8-1935 ರಲ್ಲಿ ಮೈಸೂರು ತಾಲೂಕು ಕಚೇರಿಗೆ ಅರ್ಜಿ ಕೊಡ್ತಾರೆ. ಅದರ ಮೇಲೆ ಹರಾಜ್ ನಡೆಯುತ್ತದೆ. ಆಗ ಹರಾಜಿನ ಮೊತ್ತ 3 ರೂಪಾಯಿ. 26-9-1935 ರಲ್ಲಿ ಹರಾಜು ನೋಟಿಸ್ ಕೊಡ್ತಾರೆ. 13-10-1935 ರಲ್ಲಿ ಹರಾಜಿನಲ್ಲಿ ಭಾಗವಹಿಸಿ ಒಂದು ರೂಪಾಯಿಗೆ ಕೂಗುತ್ತಾರೆ. ಆಗ ಕೂಗಿದಾಗ ಬೇರೆ ಯಾರೂ ಇರೋದಿಲ್ಲ, ನಿಂಗಾ ಒಬ್ಬರೇ ಇರುತ್ತಾರೆ. ಆಗ ನಿಂಗಾಗೆ ಹರಾಜಿನಲ್ಲಿ 1 ರೂ.ಗೆ ಕ್ರಯ ಆಗುತ್ತದೆ. 13-10-1935 ರಲ್ಲಿ ಹರಾಜಿನಲ್ಲಿ ಕ್ರಯ ಆಯ್ತು ಅದಕ್ಕೆ ಸೇಲ್ ಕನ್ಫರ್ಮ್ ಆಗುತ್ತದೆ. ಈ ಜಮೀನು ಹರಾಜಿನ ಮೂಲಕ ಬಂದಿರೋದು ಎಂದು ಸೇಲ್ ಕನ್ಫರ್ಮ್ ದಾಖಲಾತಿಯನ್ನು ಸಿಎಂ ಬಿಡುಗಡೆ ಮಾಡಿದರು.
ಇದು ಸ್ವಯಾರ್ಜಿತ ಆಸ್ತಿ, ಇದಕ್ಕೆ PTCL ಕಾಯ್ದೆ ಅನ್ವಯ ಆಗುವುದಿಲ್ಲ. ಬಿಜೆಪಿ-ಜೆಡಿಎಸ್ ತಪ್ಪು ಮಾಹಿತಿ ಕೊಡ್ತಿದ್ದಾರೆ. ಬಹಳ ಹರಸಾಹಸ, ಕುಟಿಲ ಸಾಹಸ ಮಾಡ್ತಿದ್ದಾರೆ. ಹರಾಜಿನಲ್ಲಿ ಕೊಂಡುಕೊಂಡಿದ್ದರೂ PTCL ಕಾಯ್ದೆ ಅನ್ವಯ ಆಗುತ್ತೆ ಅಂತಾ ಹೇಳಿದ್ದಾರೆ. ಈ ಸೇಲ್ ಕಾನೂನು ಪ್ರಕಾರ ಇದೆ. ನಿಂಗಾ ಬಿನ್ ಜವರಾಗೆ ಮೂರು ಜನ ಮಕ್ಕಳು ಇರುತ್ತಾರೆ. ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ಎಂದು ಸಿಎಂ ವಂಶವೃಕ್ಷ ಬಿಡುಗಡೆ ಮಾಡಿದರು. ಮಲ್ಲಯ್ಯನಿಗೆ ವಾರಸುದಾರರು ಇರೋದಿಲ್ಲ. 2ನೇ ಮಗ ಮೈಲಾರಯ್ಯ ಹೆಂಡತಿ ಪುಟ್ಟಗೌರಮ್ಮ ಅವರ ಮಗ ಒ.ಮಂಜುನಾಥ್ ಸ್ವಾಮಿ. ದೇವರಾಜ್ ಮೂರನೇ ಮಗ. ವಂಶವೃಕ್ಷಕ್ಕೆ ಮೂರು ಜನ ಸಹಿ ಹಾಕಿದ್ದಾರೆ. ಮಲ್ಲಯ್ಯ, ಪುಟ್ಟಗೌರಮ್ಮ, ದೇವರಾಜು, ಮಂಜುನಾಥ್ ಸ್ವಾಮಿ ಮೂರು ಜನರು ಸಹಿ ಹಾಕಿದ್ದಾರೆ. ಹೀಗಾಗಿ ವಂಶವೃಕ್ಷ ಸರಿಯಾಗಿದೆ. ವಂಶವೃಕ್ಷದ ಪ್ರಕಾರ ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ನಿಂಗಾನ ಮಕ್ಕಳು ಎಂದರು.
10-4-1993 ರಲ್ಲಿ ದೇವರಾಜ್ ಅನ್ನೋರಿಗೆ ಖಾತೆ ಮಾಡೋಕೆ ಏನು ವಿರೋಧ ಇಲ್ಲ ಅಂತಾ ಸರ್ಕಾರಕ್ಕೆ ಖಾತೆ ಬರೆದುಕೊಡ್ತಾರೆ. ಮಲ್ಲಯ್ಯ, ಪುಟ್ಟಗೌರಮ್ಮ, ದೇವರಾಜ್ ಸಹಿ ಮಾಡಿಕೊಟ್ಟಿರುತ್ತಾರೆ. ಖಾತೆ ಮಾಡಿಕೊಡೋಕೆ ನಮಗೆ ಯಾವುದೇ ವಿರೋಧ ಇಲ್ಲ ಅಂತಾ ಸಹಿ ಹಾಕಿದ್ದಾರೆ. ನಾವು ಮಾಡಿಸಿರೋ ಸಹಿಯಲ್ಲ ಅವರು ಮಾಡಿರೋದು. ಇಷ್ಟೆಲ್ಲ ಇದ್ದರೂ ಬಿಜೆಪಿ ಅವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಇದಾದ ಮೇಲೆ ಪಹಣಿ ಕೂಡಾ ದೇವರಾಜ್ ಹೆಸರಲ್ಲಿ ಆಗಿದೆ ಎಂದು ಸಿಎಂ ದಾಖಲಾತಿಗಳ ಮಾಹಿತಿ ಓದಿದರು. ಎಲ್ಲರೂ ಸಹಿ ಹಾಕಿದ ಆಧಾರದಲ್ಲಿ ದೇವರಾಜ್ ಹೆಸರಿನಲ್ಲಿ ದಾಖಲೆ ಆಗಿದೆ. ಹೀಗಾಗಿ ಬಿಜೆಪಿ ಹೇಳಿದ್ರಲ್ಲಿ ಸತ್ಯ ಇಲ್ಲ. ಬಿಜೆಪಿ ಅವರಿಗೆ ನಾಚಿಕೆ ಇಲ್ಲವಾ. ಮಾನ ಮರ್ಯಾದೆ ಇದೆಯಾ? ಮಂಜುನಾಥ್ ಸ್ವಾಮಿಯನ್ನ ಎತ್ತಿಕಟ್ಟಿ ನಮಗೂ ಭಾಗ ಬರಬೇಕು ಅಂತಾ ಬಿಜೆಪಿ ಅವರು ಎತ್ತಿಕ್ಕಿ ಹೇಳಿಕೆ ಕೊಡಿಸ್ತಾರೆ. 24 ವರ್ಷಗಳ ಮೇಲೆ ಚಿತಾವಣೆ ಮಾಡಿ ಮಂಜುನಾಥ್ ಎತ್ತಿಕಟ್ಟಿ ಆರೋಪ ಮಾಡ್ತಿದ್ದಾರೆ. ಮಂಜುನಾಥ್ ಸ್ವಾಮಿಯೂ ಅಂದು ಸಹಿ ಹಾಕಿದ್ದ. ಈಗ ನಮಗೂ ಭಾಗ ಬರಬೇಕು ಅಂತಾ ಹೇಳಿಸಿಕೊಡ್ತಿದ್ದಾರೆ ಬಿಜೆಪಿ ಅವರು. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಅವರು ಅನ್ಯೋನ್ಯವಾಗಿ ಇದ್ದರು. ಈ ಬಿಜೆಪಿ ಎತ್ತಿ ಕಟ್ಟಿದೆ. ಮನೆ ಮುರುಕರು ಬಿಜೆಪಿ ಅವರು. ದೇವರಾಜ್ ಹೆಸರಿಗೆ ಪಹಣಿಯಾಗಿದೆ. ಇದಾದ ಮೇಲೆ ಮುಡಾದವರು ಈ ಜಮೀನನ್ನ 464 ಸರ್ವೆ ನಂಬರ್ ಅನ್ನ 1992 ರಲ್ಲಿ ಪ್ರಾಥಮಿಕ ನೋಟಿಫಿಕೇಶನ್ ಹೊರಡಿಸುತ್ತಾರೆ ಸೈಟ್ ಮಾಡೋಕೆ. 1997 ರಲ್ಲಿ ಫೈನಲ್ ನೋಟಿಫಿಕೇಶನ್ ಆಗುತ್ತದೆ. ಬಿಜೆಪಿ-ಜೆಡಿಎಸ್ ಅವರು ಅರ್ಜಿ ಕೊಡದೆ ಡಿ-ನೋಟಿಫಿಕೇಶನ್ ಆಗಿದೆ ಅಂತಾರೆ. 1996-97 ರಲ್ಲಿ ಮಂತ್ರಿ ಆಗಿದ್ದವರು ಬಚ್ಚೇಗೌಡರು. ಜಮೀನುದಾರ ದೇವರಾಜ್ ಅವರು 13-8-1996 ರಲ್ಲಿ ಅರ್ಜಿ ಕೊಡ್ತಾರೆ. ನನಗೆ ನನ್ನ ತಂದೆ ಅವರಿಂದ ಪಿತ್ರಾರ್ಜಿತವಾಗಿ ಬಂದಿದ್ದು ಈ ಜಮೀನಿನಲ್ಲಿ ಜೀವನ ಮಾಡ್ತಿದ್ದೇನೆ. ದೇವರಾಜ್ ನಗರಾಭಿವೃದ್ಧಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಅಂತಾ ಅರ್ಜಿ ಹಾಕಿರುತ್ತಾರೆ. ಆಗ ಡಿ-ನೋಟಿಫಿಕೇಶನ್ ಮಾಡೋಕೆ ಒಂದು ಸಮಿತಿ ಇರುತ್ತದೆ. ಬಾಲಸುಬ್ರಹ್ಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇತ್ತು ಎಂದು ಅಂದಿನ ಸಭಾ ನಡಾವಳಿ ಓದಿದರು.
ಡಿ-ನೋಟಿಫಿಕೇಶನ್ 1998 ರಲ್ಲಿ ಆಗುತ್ತದೆ ಈ ಜಮೀನು. ಇದಾದ ಮೇಲೆ ಮಲ್ಲಿಕಾರ್ಜುನ ಸ್ವಾಮಿ 2004 ರಲ್ಲಿ ಜಮೀನು ಖರೀದಿ ಮಾಡ್ತಾರೆ. ದೇವರಾಜ್ ಅವರಿಂದ ಕ್ರಯ ಮಾಡಿಸಿಕೊಳ್ತಾರೆ. ದೇವರಾಜ್ ಹೆಂಡತಿ ಮಕ್ಕಳು ಸಹಿ ಮಾಡಿ ಕೊಟ್ಟಿದ್ದಾರೆ. ಕಾನೂನು ಪ್ರಕರ ಕ್ರಯ ಆಗುತ್ತದೆ. 2005 ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಲ್ಯಾಂಡ್ ಕನ್‌ವರ್ಷನ್ ಮಾಡಿಸಿಕೊಂಡಿದ್ದಾರೆ. ನಮ್ಮ ಮಾವನಿಗೆ ಮೂರು ಜನ ಮಕ್ಕಳು. ಮಲ್ಲಿಕಾರ್ಜುನ ಸ್ವಾಮಿ, ಜಗದೀಶ್ ಮತ್ತು ನನ್ನ ಹೆಂಡತಿ. ನನ್ನ ಹೆಂಡತಿ ಮದ್ಯದವಳು. ಆಗ ಭಾಗ ಆಯ್ತು. 2010 ರಲ್ಲಿ ದಾನಪತ್ರದ ಮೂಲಕ ನನ್ನ ಹೆಂಡತಿಗೆ ಮಲ್ಲಿಕಾರ್ಜುನ ಸ್ವಾಮಿ ಕೊಡ್ತಾರೆ. ಇದರಲ್ಲಿ ಏನಾದ್ರು ಅಕ್ರಮ ಇದೆಯಾ? 2013-2014 ರಲ್ಲಿ ನಮಗೆ ಗೊತ್ತಾಯ್ತು ಮುಡಾದವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಸೈಟ್ ಮಾಡಿ, ಪಾರ್ಕ್ ಮಾಡಿದ್ದಾರೆ ಅಂತಾ. ಆಗ ನಾವು ನಮಗೆ ಪರ್ಯಾಯ ಜಮೀನು ಕೊಡಿ ಅಂತಾ ಅರ್ಜಿ ಹಾಕ್ತೀವಿ. ಇದರಲ್ಲಿ ಏನಾದ್ರು ತಪ್ಪು ಇದೆಯಾ? ಕಾನೂನು ಉಲ್ಲಂಘನೆ ಇದೆಯಾ? 2014ರಲ್ಲಿ ಸಿಎಂ ಆಗಿದ್ದಾಗ ಈ ವಿಚಾರವನ್ನು ನನ್ನ ಹೆಂಡತಿ ನನ್ನ ಗಮನಕ್ಕೆ ತರುತ್ತಾಳೆ. ಸಿಎಂ ಇದ್ದಾಗ ನಾನು ಇದನ್ನ ಮಾಡೊಲ್ಲ ಅಂತಾ ಹೇಳ್ತೀನಿ. ಆಮೇಲೆ ಮಾಡಿ ಅಂತಾ ನಾನು ಹೇಳಿರುತ್ತೇನೆ. 23-6-2014 ರಲ್ಲಿ ಮೊದಲ ಅರ್ಜಿ ಕೊಡಲಾಗುತ್ತದೆ. ಇದರ ಮೇಲೆ ಏನು ಆಕ್ಷನ್ ಆಗೊಲ್ಲ. 2017 ರಲ್ಲಿ ಮುಡಾ ಒಂದು ನಿರ್ಣಯ ಮಾಡ್ತಾರೆ. ಪ್ರಾಧಿಕಾರದಿಂದ ಭೂಸ್ವಾಧೀನ ಮಾಡಿಕೊಂಡಿದ್ದು ತಪ್ಪಾಗಿದೆ. ಬದಲಿ ಜಾಗ ನೀಡಲು ನಿರ್ಣಯ ಮಾಡಲಾಗಿತ್ತು. 2021 ರಲ್ಲಿ ನಾವು ಮತ್ತೆ ಮುಡಾಗೆ ಅರ್ಜಿ ಕೊಡ್ತೀವಿ. ನಮ್ಮ ಜಾಗದಲ್ಲಿ ನಿವೇಶನ ಮಾಡಿರೋದ್ರಿಂದ ಅಭಿವೃದ್ದಿ ಪಡಿಸಿದ 50:50 ನಿವೇಶನ ಅಡಿ ಕೊಡಿ ಅಂತಾ ನಾವು ಕೇಳಿದ್ವಿ. ಇಲ್ಲೇ ಕೊಡಿ ಅಂತಾ ನಾವು ಕೇಳಿಲ್ಲ. ಮುಡಾದವರೇ ವಿಜಯನಗರದಲ್ಲಿ ನಮಗೆ ಸೈಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಮ್ಮದು 3 ಎಕರೆ 16 ಕುಂಟೆ ಅಂದರೆ ಒಟ್ಟು 1,48,000 ಚದರಡಿ. ನಮಗೆ ಅವರು ಕೊಟ್ಟಿರೋದು 38,284 ಚದರ ಅಡಿ. ನಮ್ಮಿಂದ ಜಮೀನು 1,48,000 ಚದರ ಅಡಿ ತಗೊಂಡು ನಮಗೆ 38,284 ಚದರ ಅಡಿ ಅಭಿವೃದ್ಧಿ ಪಡಿಸಿದ ಸೈಟ್ ಕೊಟ್ಟಿದ್ದಾರೆ. ಅಂದಿನ ಮುಡಾ ಕಮಿಟಿಯಲ್ಲಿ ರಾಮದಾಸ್, ಜಿಟಿ ದೇವೇಗೌಡ, ನಾಗೇಂದ್ರ ಇದ್ದರು. ಅಂದು ಅವರೇ ನಿರ್ಣಯ ಮಾಡಿದ್ದಾರೆ. ಅಭಿವೃದ್ಧಿ ಪಡಿಸಿದ 50:50 ಭೂ ಪರಿಹಾರ ಕೊಡಲು ಕಮಿಟಿ ನಿರ್ಧಾರ ಮಾಡಿದೆ. 50:50 ನಿರ್ಣಯದ ಪ್ರಕಾರ 909 ನಿವೇಶನ ಹಂಚಿಕೆ ಆಗಿರುತ್ತವೆ. ಒಟ್ಟು 1328 ನಿವೇಶನ ಅಂದು ಹಂಚಿಕೆ ಆಗಿವೆ. ನಾವು ಇಂತಹ ಜಾಗದಲ್ಲಿ ಕೊಡಿ ಅಂತಾ ಕೇಳಿಲ್ಲ. ಅವರೇ ಕೊಟ್ಟಿರೋದು. ಬಿಜೆಪಿ ಅವರೇ ಕಮಿಟಿಯಲ್ಲಿ ಇದಕ್ಕೆ ಒಪ್ಪಿಗೆ ಕೊಟ್ಡಿದ್ದಾರೆ. ಇದರಲ್ಲಿ ಅಕ್ರಮ ಎಲ್ಲಿ ಆಗಿದೆ. ವಿಜಯನಗರ ಬಡಾವಣೆಯಲ್ಲಿ ಬೇರೆ ಬೇರೆ ಅವರಿಗೂ 125 ಸೈಟ್ ಕೊಟ್ಟಿದ್ದಾರೆ. ನಮಗೂ ಹಾಗೇ ಕೊಟ್ಡಿದ್ದಾರೆ. ನನ್ನದಾಗಲಿ, ನನ್ನ ಹೆಂಡತಿ, ನನ್ನ ಬಾಮೈದನದ್ದು ತಪ್ಪು ಇದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲಿ ಯಾರು ಯಾರಿಗೆ ನಿವೇಶನ ಕೊಟ್ಟಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ದಾಖಲಾತಿ ಬಿಡುಗಡೆ ಮಾಡಿದರು. ಯಾರಿಗೆ ಮುಡಾ ಸೈಟ್ ಹಂಚಿಕೆ ಎಂದು ವಿಪಕ್ಷಗಳ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಹೆಚ್.ವಿಶ್ವನಾಥ್, ಜಿ.ಟಿ.ದೇವೇಗೌಡ, ಮಂಜೇಗೌಡ, ಸಾ.ರಾ.ಮಹೇಶ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೆಸರಿರುವ ಪಟ್ಟಿ ಬಿಟ್ಟಿದ್ದಾರೆ.