ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಹೈಕೋರ್ಟ್ (High Court) ತೀರ್ಪು ತಮ್ಮ ವಿರುದ್ದವಾಗಿ ಬಂದ ಕಾರಣ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಕಾನೂನು ಹೋರಾಟದ ಜೊತೆ ಜೊತೆಗೆ ರಾಜಕೀಯವಾಗಿಯೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇಂದು ಸಿಎಂ ನಿವಾಸಕ್ಕೆ ಅವರ ಬೆಂಬಲಿಗ ಸಚಿವರು, ಶಾಸಕರು ಧಾವಿಸಿ ಚರ್ಚೆ ನಡೆಸಿದರು. ಹೈಕಮಾಂಡ್ ಕೂಡ ಕರೆ ಮಾಡಿ ಮಾಹಿತಿ ಪಡೆದುಕೊಂಡಿದೆ. ಸದ್ಯದ ಬೆಳವಣಿಗೆಯಿಂದ ಹೀಗಾಗಿ ಮುಂದೆ ಕಾನೂನಾತ್ಮಕವಾಗಿ, ರಾಜಕೀಯವಾಗಿ ಮುಂದೆ ಏನೆಲ್ಲಾ ಆಗಬಹುದು? ಯಾರ ನಡೆ ಏನಾಗಿರಬಹುದು ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಸಿಎಂಗೆ ಮುಡಾ ಸಂಕಷ್ಟ – ತನಿಖೆ ಹೇಗೆ? ಪ್ರಾಸಿಕ್ಯೂಷನ್ ಯಾಕಿಲ್ಲ?
ಕಾನೂನಾತ್ಮಕವಾಗಿ ಮುಂದೇನು?
ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ಗೆ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್ ಜನಪ್ರತಿನಿಧಿಗಳ ಕೋರ್ಟ್ ವಿಚಾರಣೆಗೆ ತಡೆ ನೀಡಿತ್ತು.
ಈಗ ಹೈಕೋರ್ಟ್ ತೀರ್ಪು ಪ್ರಕಟವಾಗಿದ್ದು ಬುಧವಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ. ಒಂದು ವೇಳೆ ಕೋರ್ಟ್ ತನಿಖೆಗೆ ಆದೇಶ ನೀಡಿದರೆ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿಎಂ ಕುಟುಂಬದವರೇ ಫಲಾನುಭವಿ ಆಗಿರೋದ್ರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್ ಆದೇಶದಲ್ಲಿ ಏನಿದೆ?
ಸಿಎಂ ಮುಂದಿರುವ ಆಯ್ಕೆಗಳೇನು?
ರಾಜೀನಾಮೆ ನೀಡದೇ ತನಿಖೆ ಎದುರಿಸುವುದು ಮತ್ತು ಕಾನೂನು ಹೋರಾಟಕ್ಕೆ ಮುಂದಾಗುವುದು. ಕಾಂಗ್ರೆಸ್ ಹೈಕಮಾಂಡ್ (Congress High Command) ನಿರ್ಧಾರದವರೆಗೂ ಕಾಯುವುದು.
ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರೆಯುವುದು. ಸರಣಿ ಚುನಾವಣೆ ಇರುವ ಸದ್ಯಕ್ಕೆ ಆತುರದ ನಿರ್ಧಾರ ಕೈಗೊಳ್ಳುವುದು ಅನುಮಾನ. ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಹಿಂಜರಿಯಬಹುದು. ಡಿಸೆಂಬರ್ ಬಳಿಕ ಸಿಎಂ ವಿಚಾರದಲ್ಲಿ ಹೈಕಮಾಂಡ್ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.