ಮೈಸೂರು: ರಾತ್ರೋರಾತ್ರಿ ನೋಟಿಸ್ ಇಲ್ಲದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA Scam) ಸೈಟ್ ಹಂಚಿಕೆ ಅಕ್ರಮದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಪಿ (Lokayukta SP) ಟಿ.ಜೆ.ಉದೇಶ್ ಅವರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಭಾಮೈದ ಮಲ್ಲಿಕಾರ್ಜುನ ಸ್ವಾಮಿ (Mallikarjuna Swamy) ಭೇಟಿ ಮಾಡಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.
ಹೌದು. ಮಂಗಳವಾರ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ (DB Natesh) ಲೋಕಾಯುಕ್ತ ಎಸ್‌ಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ನಟೇಶ್ ವಿಚಾರಣೆ ಮುಗಿದ ಅರ್ಧಗಂಟೆಯ ಬಳಿಕ ಮಲ್ಲಿಕಾರ್ಜುನ ಸ್ವಾಮಿ ಅವರು ಉದೇಶ್ ಅವರನ್ನು ಭೇಟಿಯಾಗಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿ ಸಿಎಂ ಪತ್ನಿ ಸೈಟ್ ಪಡೆದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ. ರಾತ್ರಿ 7:30ಕ್ಕೆ ಲೋಕಾಯುಕ್ತ ಕಚೇರಿಗೆ ದಿಢೀರ್ ಎಂಟ್ರಿ ನೀಡಿದ ಅವರು 8 ಗಂಟೆಯವರೆಗೆ ಕಚೇರಿ ಒಳಗಡೆಯೇ ಇದ್ದರು.
ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತರಿಂದ ನೋಟಿಸ್ ನೀಡಿದ್ದರೆ ಸಾಧಾರಣವಾಗಿ ಆರೋಪಿಗಳು ಬೆಳಗ್ಗೆ ಅಥವಾ ಮಧ್ಯಾಹ್ನದ ನಂತರ ಹಾಜರಾಗುತ್ತಾರೆ. ಆದರೆ ಇಲ್ಲಿ ವಿಚಾರಣೆಯೂ ಇಲ್ಲ, ನೋಟಿಸ್ ಇಲ್ಲದೇ ಇದ್ದರೂ ರಾತ್ರಿ ವೇಳೆ ತನಿಖಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ಮಲ್ಲಿಕಾರ್ಜುನಸ್ವಾಮಿ ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನ.18 ರಂದು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಬೆಂಗ್ಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ – ಯುವತಿ ಸಜೀವ ದಹನ
ಎದ್ದಿದೆ ಹಲವು ಪ್ರಶ್ನೆಗಳು
– ರಾತ್ರೋರಾತ್ರಿ ತನಿಖಾಧಿಕಾರಿ ಭೇಟಿ ಮಾಡುವ ಅನಿವಾರ್ಯತೆ ಆರೋಪಿಗೆ ಏನಿತ್ತು?
– ಮಾಜಿ ಆಯುಕ್ತ ವಿಚಾರಣೆ ಮುಗಿದ ಕೂಡಲೇ ವಿಚಾರಣಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದು ಯಾಕೆ?
– ರಾತ್ರಿ ವೇಳೆ ಲೋಕಾಯುಕ್ತ ಕಚೇರಿಗೆ ಬರಲು ಆರೋಪಿಗೆ ಅವಕಾಶ ಕೊಟ್ಟಿದ್ದು ಯಾರು?