ಚುರುಕು ಪಡೆದ ಮುಡಾ ಹಗರಣದ ತನಿಖೆ – ಮೂರು ಪಕ್ಷದ ನಾಯಕರಿಗೆ ಈಗ ಭಯ

Public TV
1 Min Read
mysuru muda

ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಸಿಕ್ಕಿದ  ಕೂಡಲೇ ಇತ್ತ ಮೂಡಾ ಹಗರಣದ (MUDA Scam) ತನಿಖೆಯೂ ಚುರುಕು ಪಡೆದಿದೆ. ವಿಚಾರಣೆಯ ಚುರುಕಿಗೆ ಸಿದ್ದರಾಮಯ್ಯ ಹೆದರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮೈಸೂರಲ್ಲಿ ಬಹಳಷ್ಟು ರಾಜಕಾರಣಿಗಳಿಗೆ (Politicians) ನಡುಕ ಶುರುವಾಗಿದೆ.

ಮೂಡಾ ಹಗರಣದ ಕೇಂದ್ರ ಬಿಂದುವೇ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆ ಆಗಿರುವ 50:50 ಅನುಪಾತದ ಸೈಟ್‌ಗಳು. ಮೇಲ್ನೋಟಕ್ಕೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬಂದಿರುವ 14 ಸೈಟ್‌ಗಳ ವಿಚಾರ ಮಾತ್ರ ಹೆಚ್ಚು ಚರ್ಚೆಯಲ್ಲಿದೆ. ಆದರೆ ಇದೇ ಅನುಪಾತದಲ್ಲಿ 2018ರಿಂದ ಇಲ್ಲಿಯವರೆಗೂ ಮಂಜೂರಾಗಿರುವ ಸೈಟ್‌ಗಳ ಸಂಖ್ಯೆ ಸಾವಿರ ದಾಟುತ್ತಿದೆ. ಅಲ್ಲಿಗೆ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್‌ನ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು ಇದರಲ್ಲಿ ಪಾಲುದಾರರಾಗಿರುವುದು ಸ್ಪಷ್ಟವಾಗಿದೆ.  ಇದನ್ನೂ ಓದಿ: ತಂದೆ ಮಾಡದ ತಪ್ಪಿಗೆ ಈ ರೀತಿ ಆರೋಪಕ್ಕೆ ಗುರಿಯಾಗಿದ್ದು ಬೇಸರ ತರಿಸಿದೆ: ಯತೀಂದ್ರ ಭಾವುಕ

 

ಸಿಎಂ ಅವರ ಕುಟುಂಬಕ್ಕೆ 50:50 ಅನುಪಾತದಲ್ಲಿ ಸೈಟ್ ಸಿಕ್ಕಿರುವಾಗ ತಮಗೆ ಬಂದಿರುವ ಸೈಟ್‌ಗಳಿಗೆ ಯಾವ ತೊಂದರೆಯೂ ಇಲ್ಲ ಎಂದು ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ತನಿಖೆ ಸಾಗುತ್ತಿರುವ ರೀತಿ ನೋಡಿದರೆ ಇವತ್ತಲ್ಲ ನಾಳೆ ಎಲ್ಲರ ಬಂಡವಾಳಗಳು ಬಯಲಾಗಲಿದೆ.

ತನಿಖೆಯಲ್ಲಿ ಯಾರು ಯಾರು ಪ್ರಭಾವದ ಮೇಲೆ ಸೈಟ್ ಪಡೆದಿದ್ದಾರೆ. ಯಾರ ಹೆಸರಲ್ಲಿ ಯಾರು ಬೇನಾಮಿ ಆಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಬಿಟ್ಟರೆ ಎಲ್ಲಿ ಮರ್ಯಾದೆ ಮೂರು ಪಾಲಾಗುತ್ತೆ ಎನ್ನುವ ಭಯ 50:50 ಅನುಪಾತದ ಅಡಿ ಸೈಟ್ ಪಡೆದವರಲ್ಲಿ ಶುರುವಾಗಿದೆ. ಮರ್ಯಾದೆ ಜೊತೆ ಸೈಟ್‌ಗಳು ಜಪ್ತಿ ಆದರೆ ಕಥೆ ಏನು ಎನ್ನುವುದು ಬಹಳಷ್ಟು ಜನರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಾರೆ ಮೂಡಾ ಹಗರದ ತನಿಖೆ ಜೋರಾಗುತ್ತಿದ್ದಂತೆ ಹಲವರಲ್ಲಿ ಭಯವಂತೂ ಶುರುವಾಗಿದೆ. ಈ ತನಿಖೆಯ ಮೂಲಕ ಮೂಡಾ ಸ್ವಚ್ಛವಾದರೆ ಸಾಕು ಎನ್ನುತ್ತಿದ್ದಾರೆ ಮೈಸೂರಿನ ಪ್ರಜ್ಞಾವಂತ ಜನರು.

 

Share This Article