ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಮುಡಾ ಹಗರಣ (MUDA Scam) ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ನೋಟಿಸ್ ನೀಡಿದ ರಾಜ್ಯಪಾಲರ (Governor) ನಡೆ ಖಂಡಿಸಿ ರಾಜ್ಯ ಮಂತ್ರಿ ಪರಿಷತ್ ಗುರುವಾರ ಸುದೀರ್ಘ ನಿರ್ಣಯ ಅಂಗೀಕರಿಸಿದೆ. ಮಂತ್ರಿ ಪರಿಷತ್ ನಿರ್ಣಯದ ಬೆನ್ನಲ್ಲೇ ರಾಜ್ಯಪಾಲರ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಾಗಿದೆ.
ದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಆಗಸ್ಟ್ 4ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ. ಆಗಸ್ಟ್ 5ರಂದು ಸರ್ಕಾರದ ಮಂತ್ರಿ ಪರಿಷತ್ ನಿರ್ಣಯ, ಸಿಎಂ ಸಿದ್ದರಾಮಯ್ಯ ವಿವರಣೆಯನ್ನು ಪರಿಶೀಲನೆ ನಡೆಸಲಿದ್ದಾರೆ. ಪರಿಷತ್ ನಿರ್ಣಯ ಒಪ್ಪುವುದು, ತಿರಸ್ಕರಿಸುವುದು ರಾಜ್ಯಪಾಲರ ವಿವೇಚನೆ ಬಿಡಲಾಗಿದೆ.
ಭ್ರಷ್ಟಾಚಾರ (Corruption) ಆರೋಪ ಸಂಬಂಧ ಸಿಎಂಗೆ ಜುಲೈ 26ಕ್ಕೆ ರಾಜ್ಯಪಾಲರು ನೋಟಿಸ್ ನೀಡಿದ್ದು, ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಏಕೆ ಅನುಮತಿ ನೀಡಬಾರದು? ಏಳು ದಿನಗಳಲ್ಲಿ ಉತ್ತರಿಸಿ ಎಂದು ಕೇಳಿದ್ದರು. ಗುರುವಾರ ಉತ್ತರ ನೀಡಲು ಕೊನೆಯ ದಿನ ಕೂಡ ಆಗಿತ್ತು.
ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
7 ದಿನಗಳ ಒಳಗಡೆ ಉತ್ತರ ನೀಡದಿದ್ದರೆ ಮತ್ತೊಮ್ಮೆ ನೋಟಿಸ್ ಕೊಡಬಹುದು. 3-4 ದಿನಗಳ ಕಾಲಾವಕಾಶ ನೀಡಿ ಮತ್ತೊಮ್ಮೆ ನೋಟಿಸ್ ನೀಡಬಹುದು. ದೂರುದಾರನನ್ನು ಕರೆದು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಬಹುದು. ಎರಡನೇ ನೋಟಿಸ್‌ಗೂ ಉತ್ತರ ನೀಡದೇ ಇದ್ದರೆ ಮುಂದಿನ ನಿರ್ಧಾರ ಕೈಗೊಳ್ಳಬಹುದು.
ಮಂತ್ರಿ ಪರಿಷತ್ ವಿಸ್ತೃತವಾದ 4 ಪುಟಗಳ ಉತ್ತರವನ್ನು ತಯಾರಿಸಿದ್ದು, ಅದನ್ನು ರಾಜಭವನಕ್ಕೆ ಕಳಿಸಿಕೊಟ್ಟಿದೆ. ಅಲ್ಲದೇ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮಾಡಿರುವ ಆರೋಪಗಳಿಗೆ ದಾಖಲೆ ಸಮೇತ ಉತ್ತರ ಕೊಡಲು ತೀರ್ಮಾನಿಸಿದೆ. ಕಾನೂನಾತ್ಮಕ ಹೋರಾಟಕ್ಕೂ ನಿರ್ಧರಿಸಿದೆ.
ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್‌ನಲ್ಲಿ ಬಳಸಿದ ಪದ, ಒಕ್ಕಣಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ರಾಜ್ಯಪಾಲರ ಸ್ಥಾನ ರಾಜಕೀಯವಾಗಿ ದುರುಪಯೋಗ ಆಗುತ್ತಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ. ಕೂಡಲೇ ರಾಜ್ಯಪಾಲರು ನೋಟಿಸ್ ಹಿಂಪಡೆಯಬೇಕು ಎಂದು ಮಂತ್ರಿ ಪರಿಷತ್ ಒತ್ತಾಯಿಸಿದೆ. ಇದನ್ನೂ ಓದಿ: ವಯನಾಡು ಭೂಕುಸಿತ ದುರಂತ; ಒಂದೇ ಚಿತೆಯಲ್ಲಿ ಅಜ್ಜಿ-ಮೊಮ್ಮಗನ ಅಂತ್ಯಕ್ರಿಯೆ
ಮಂತ್ರಿ ಪರಿಷತ್ ನಿರ್ಧಾರ ಏನು?
ರಾಜ್ಯಪಾಲರ ನೋಟಿಸ್ ಕಾನೂನು ಮತ್ತು ಸಂವಿಧಾನ ಬಾಹಿರವಾಗಿದ್ದು ನೋಟಿಸ್ ಕೇವಲ ರಾಜಕೀಯ ಉದ್ದೇಶದಿಂದ ಕೂಡಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದು ರಾಜ್ಯಪಾಲರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.
ರಾಜ್ಯಪಾಲರ ಮುಂದೆ ಇತ್ಯರ್ಥವಾಗದ ಬಿಜೆಪಿಗರ ಪ್ರಕರಣಗಳಿವೆ. ಮುಡಾ ತನಿಖೆ ಬಗ್ಗೆ ರಾಜ್ಯಪಾಲರಿಗೆ ವರದಿ ಕೊಡಲಾಗಿದ್ದರೂ ತನಿಖೆ ಹಂತದಲ್ಲಿ ತರಾತುರಿಯಲ್ಲಿ ಸಿಎಂಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್: ಕೇವಲ 16 ಗಂಟೆಯಲ್ಲಿ 24 ಟನ್ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!
ರಾಜ್ಯಪಾಲರ ನಡೆ ಸಂವಿಧಾನದ ಕಗ್ಗೊಲೆ, ಪ್ರಜಾಪ್ರಭುತ್ವದ ಸರ್ವನಾಶವಾಗಿದೆ. ರಾಜ್ಯಪಾಲರು ಟಿ.ಜೆ ಅಬ್ರಾಹಂ ದೂರನ್ನು ತಿರಸ್ಕರಿಸಬೇಕು ಮತ್ತು ನೀಡಿದ್ದ ನೋಟಿಸ್ ಹಿಂಪಡೆಯಬೇಕು.