ಬೆಂಗಳೂರು: ಮುಡಾ ಹಗರಣದ (MUDA Scam) ತನಿಖೆಗೆ ಅವಕಾಶ ಕೊಡುವಂತೆ ಇಂದೂ ಕೂಡಾ ವಿಧಾನ ಪರಿಷತ್‌ನಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮಧ್ಯೆ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ 6 ವಿಧೇಯಕಗಳು ಯಾವುದೇ ಚರ್ಚೆ ಆಗದೇ ಅಂಗೀಕಾರವಾದವು. ಇದರ ಜೊತೆಗೆ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸುವ 4 ನಿರ್ಣಯಗಳನ್ನ ವಿಧಾನ ಪರಿಷತ್‌ನಲ್ಲಿ ಮಂಡನೆ ಮಾಡಿ ಅಂಗೀಕಾರ ಪಡೆಯಲಾಯ್ತು.
ಬೆಳಗ್ಗೆ ಸದನ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಮೂಡಾ ಹಗರಣ ವಿಷಯ ಚರ್ಚೆಗೆ ವಿಪಕ್ಷಗಳು ನಿನ್ನೆ ನೀಡಿದ್ದ ಮರು ಪರಿಶೀಲನೆ ಅರ್ಜಿಗೆ ರೂಲಿಂಗ್ ಕೊಡುವಂತೆ ವಿಪಕ್ಷಗಳು ಒತ್ತಾಯ ಮಾಡಿದವು. ಸಭಾಪತಿ ಹೊರಟ್ಟಿ ಅವರು ವಿಪಕ್ಷಗಳ ಮರು ಪರಿಶೀಲನೆಯನ್ನು ತಿರಸ್ಕಾರ ಮಾಡಿ, ಮುಡಾ ಹಗರಣದ ಚರ್ಚೆಗೆ ಅವಕಾಶ ನಿರಾಕರಿಸಿದರು. ಸಭಾಪತಿಗಳ ರೂಲಿಂಗ್‌ಗೆ ವಿಪಕ್ಷಗಳು ವಿರೋಧಿಸಿ ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದ್ರು. ಸರ್ಕಾರ, ಸಿಎಂ ವಿರುದ್ದ ಘೋಷಣೆ ಕೂಗಿದ್ರು. ಗೋವಿಂದಾ ಗೋವಿಂದಾ ಅಂತ ಘೋಷಣೆ ಕೂಗಿ ಸರ್ಕಾರದ ವಿರುದ್ದ ಕಿಡಿಕಾರಿದರು.
ವಿಪಕ್ಷಗಳ ಪ್ರತಿಭಟನೆ ಮಧ್ಯೆ ಕರ್ನಾಟಕ ಧನ ವಿನಿಯೋಗ ವಿಧೇಯಕ 2024, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2024, ಕರ್ನಾಟಕ ನೀರಾವರಿ ತಿದ್ದುಪಡಿ ವಿಧೇಯಕ 2024,ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ಎರಡನೇ ತಿದ್ದುಪಡಿ) ವಿಧೇಯಕ 2024, ಕರ್ನಾಟಕ ಮುನಿಸಿಪಾಲಿಟಿಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ 2024ಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾದವು. ಇದನ್ನೂ ಓದಿ: ಎಂಪಿಯಾಗಿ ಕಂಗನಾ ರಣಾವತ್ ಆಯ್ಕೆ ಪ್ರಶ್ನಿಸಿ ಅರ್ಜಿ – ಹಿಮಾಚಲ ಪ್ರದೇಶ ಹೈಕೋರ್ಟ್‌ನಿಂದ ನೋಟಿಸ್
ಇದಲ್ಲದೆ 4 ನಿರ್ಣಯಗಳನ್ನು ಸರ್ಕಾರ ಮಂಡನೆ ಮಾಡಿ ಸದನದಲ್ಲಿ ಅಂಗೀಕಾರ ಪಡೆಯಿತು. 1971ರ ಜನಗಣತಿ ಅನ್ವಯ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಗಂಡಣೆ ಮಾಡಬೇಕು ಅನ್ನೋ ನಿರ್ಣಯ, ಒಂದು ದೇಶ ಒಂದು ಚುನಾವಣೆಗೆ ವಿರೋಧಿಸಿ ನಿರ್ಣಯ, ನೀಟ್ ಪರೀಕ್ಷೆ ವ್ಯವಸ್ಥೆ ಖಂಡಿಸಿ ನೀಟ್ ರದ್ದು ಮಾಡುವ ನಿರ್ಣಯ, ಹಾಗೂ ಅರಣ್ಯ ವಾಸಿಗಳ ನಿಯಮಗಳನ್ನ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು.