ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ (MUDA Scam) ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ.
ಇಂದು ಇಡಿ ವಿಚಾರಣೆಗೆ ಬರುವಂತೆ ದಿನೇಶ್ ಕುಮಾರ್‌ಗೆ ನೋಟಿಸ್ ನೀಡಿತ್ತು. ವಿಚಾರಣೆಗೆ ಬಂದ ವೇಳೆ ದಿನೇಶ್ ಕುಮಾರ್ ಅವರನ್ನು ಬಂಧನ ಮಾಡಲಾಗಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿದೆ. ದಿನೇಶ್ ಅಕ್ರಮ ಹಣ ವರ್ಗಾವಣೆ ಮಾಡಿರೋದು ಸಾಬೀತಾಗಿದೆ ಎಂದು ಈ ಹಿಂದೆ ಇಡಿ ಹೇಳಿತ್ತು. ಇದನ್ನೂ ಓದಿ: ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು
ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.
2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು. ಇದನ್ನೂ ಓದಿ: ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ